ಡಿವೈಎಸ್ಪಿ ಗಣಪತಿ ಕೇಸ್: ಸಚಿವ ಜಾರ್ಜ್ ಗೆ ಸುಪ್ರೀಂನಿಂದ ನೋಟಿಸ್
ಬೆಂಗಳೂರು : ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಹಾಗೂ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಸುಪ್ರೀಂಕೋರ್ಟಿನಿಂದ ನೋಟಿಸ್ ಜಾರಿಯಾಗಿದೆ.
ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಗಣಪತಿ ಅವರ ತಂದೆ ಎಂ.ಕೆ. ಕುಶಾಲಪ್ಪ ಅವರು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜಾರಿಯಲ್ಲಿದೆ.
ಆತ್ಮಹತ್ಯೆಗೂ ಮುನ್ನ ಗಣಪತಿ ತಮ್ಮ ಜೀವಕ್ಕೆ ಯಾವುದೇ ರೀತಿಯ ತೊಂದರೆಯಾದರೆ ಗೃಹಸಚಿವರಾಗಿದ್ದ ಕೆ.ಜೆ.ಜಾರ್ಜ್ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಮತ್ತು ಎ.ಎಂ.ಪ್ರಸಾದ್ ಅವರೇ ಕಾರಣವೆಂದು ಆರೋಪ ಮಾಡಿದ್ದಾರೆ.
ವಿಡಿಯೋ ಸಾಕ್ಷ್ಯವಿದ್ದರೂ ಯಾವುದೇ ಕ್ರಮ ಜರುಗಿಸುವಲ್ಲಿ ಕರ್ನಾಟಕ ಸರ್ಕಾರ, ತನಿಖಾ ತಂಡ ವಿಫಲವಾಗಿದೆ, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಎಂ.ಕೆ. ಗಣಪತಿ ಅವರ ತಂದೆ ಕುಶಾಲಪ್ಪ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಜಾರ್ಜ್, ಪ್ರಣವ್ ಮೊಹಾಂತಿ ಹಾಗೂ ಎ.ಎಂ ಪ್ರಸಾದ್ ಮೂವರಿಗೂ ಕ್ಲೀನ್ ಚಿಟ್ ನೀಡಿ, ಬಿ ರಿಪೋರ್ಟ್ ಸಲ್ಲಿಸಿದೆ. ಸಿಬಿಐ ತನಿಖೆಗೆ ಕೋರಿ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡ ಬಳಿಕ, ಗಣಪತಿ ಅವರ ಸೋದರ ಮಾಚಯ್ಯ, ಸೋದರಿ ಬಬಿತಾ, ತಂದೆ ಕುಶಾಲಪ್ಪ ಎಲ್ಲರೂ ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿದ್ದಾರೆ.
Comments