ಮೇಕೆದಾಟು ಕುಡಿಯುವ ನೀರಿನ ಯೋಜನೆ;ಸಿಗುವುದೆ ಹಸಿರು ನಿಶಾನೆ?
ಬೆಂಗಳೂರು : ಕುಡಿಯುವ ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿರುವ ಬೆಂಗಳೂರಿನ ಜನತೆಗೆ ಒದಗಿಸುವ ಉದ್ದೇಶದಿಂದ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟಿನ ವಿವರವನ್ನು ಅನುಮತಿಗಾಗಿ ಕೇಂದ್ರ ನೀರು ಆಯೋಗಕ್ಕೆ ಸಲ್ಲಿಸಲಾಗಿದೆ.
ಈ ಸಂಗತಿಯನ್ನು ರಾಜ್ಯ ನೀರಾವರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ತಿಳಿಸಿದ್ದಾರೆ. ಒಟ್ಟು 5,912 ಕೋಟಿ ರುಪಾಯಿಯ ಈ ಕುಡಿಯುವ ನೀರಿನ ಯೋಜನೆಯ ಸಂಪೂರ್ಣ ವಿವರವನ್ನು ಕೇಂದ್ರ ನೀರು ಆಯೋಗಕ್ಕೆ ನೀಡಲಾಗಿದೆ. ಈ ಯೋಜನೆಗೆ ಅನುಮತಿ ದೊರೆತರೆ 66.50 ಟಿಎಂಸಿಯಷ್ಟು ನೀರನ್ನು ಶೇಖರಿಸಿಡಬಹುದು.
ಈ ಯೋಜನೆಯಿಂದ ಬೆಂಗಳೂರು ಮಾತ್ರವಲ್ಲ ಸುತ್ತಲಿನ ಹಳ್ಳಿಗಳಿಗೂ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದಾಗಿದೆ. ಮೇಕೆದಾಟಿನಲ್ಲಿ ಕಾವೇರಿ ನೀರು ಪೋಲಾಗುತ್ತಿದ್ದು, ಕರ್ನಾಟಕದ ವ್ಯಾಪ್ತಿಯಲ್ಲಿ ಅಣೆಕಟ್ಟು ಕಟ್ಟಬೇಕೆಂಬುದು ಕರ್ನಾಟಕದ ಆಶಯ. ಇದಕ್ಕೆ ತಮಿಳು ನಾಡುಆರಂಭದಿಂದಲೇ ಕ್ಯಾತೆ ತೆಗೆದಿದೆ.
ಈ ಅಣೆಕಟ್ಟಿನ ನಿರ್ಮಾಣದಿಂದ ತಮಿಳುನಾಡಿಗೆ ಹರಿಯುವ ನೀರನ್ನು ಹಿಡಿದಿಟ್ಟುಕೊಂಡಂತೆ ಆಗುವುದಿಲ್ಲ. ಅಲ್ಲದೆ, ರಾಜ್ಯ 190 ಟಿಎಂಸಿಯಷ್ಟು ಕಾವೇರಿ ನೀರನ್ನು ಬಳಸಿಕೊಳ್ಳಬಹುದು ಎಂಬ ಕಾವೇರಿ ನ್ಯಾಯಮಂಡಳಿಯ ಆದೇಶವನ್ನೂ ಉಲ್ಲಂಘಿಸಿದಂತೆ ಆಗುವುದಿಲ್ಲ. ಜೊತೆಗೆ 400 ಮೆಗಾ ವ್ಯಾಟ್ ನಷ್ಟು ವಿದ್ಯುತ್ ಕೂಡ ಉತ್ಪಾದಿಸಬಹುದು ಎಂದು ಪಾಟೀಲರು ವಿವರ ನೀಡಿದ್ದಾರೆ.
Comments