ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಜ್ಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ್ ಡಾ. ಕುಮಾರ್ ಗೌಡ ಮತ್ತವರ ಸ್ನೇಹಿತ ಪ್ರಕಾಶ್ ಅವರಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೋಲಾರ ಜಿಲ್ಲೆಯ ಮುಳುಬಾಗಿಲಿನಲ್ಲಿರುವ ಕುಮಾರ್ ಗೌಡ ಒಡೆತನದ ಸಾಯಿ ವಿಹಾರಿಕಾ ನರ್ಸಿಂಗ್ ಹೋಮ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕಲಬುರಗಿ ನಗರದಲ್ಲೂ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿರುವುದು ಬೆಳಕಿಗೆ ಬಂದಿದೆ. ಜೆಸ್ಕಾಂ ಎಇಇ ಸಹದೇವ ಮಾನಕೆರೆ ನಿವಾಸದ ಮೇಲೆ ದಾಳಿ ನಡೆಸಿ,
ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನಲೆ ಜೇವರ್ಗಿ ಕಾಲೋನಿ ಮತ್ತು ಬೀದರ್ ನಗರದಲ್ಲಿ ಸಹದೇವಾ ಅವರಿಗೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಹಾವೇರಿ ನಗರದ ಬಸವೇಶ್ವರ ನಗರದಲ್ಲಿಯೂ ಕಂದಾಯ ನಿರೀಕ್ಷಕ ವಿಜಯಕುಮಾರ ಗುಡಿಗೇರಮನೆ ಮೇಲೆ ದಾಳಿ ನಡೆಸಲಾಗಿದೆ.
ದಾವಣಗೆರೆಯಲ್ಲೂ ಕೂಡ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಬೆಂಗಳೂರು ಕೇಂದ್ರ ವಲಯದ ಸಾರಿಗೆ ಆಯುಕ್ತ ಕೆ.ಟಿ ಹಾಲಸ್ವಾಮಿಯ ಮನೆ ಮೇಲೆ ದಾಳಿ ನಡೆದಿದೆ. ಆದಾಯ ಮೀರಿ ಜಾಸ್ತಿ ಗಳಿಕೆ ಮಾಡಿದ್ದಾರೆಂಬ ದೂರಿನ ಹಿನ್ನಲೆಯಲ್ಲಿ ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿರುವ ಕೆಬಿಜೆಎನ್ ಎಲ್ ಸಹಾಯಕ ಎಂಜಿನಿಯರ್ ಚನ್ನಪ್ಪ ಕಂದಾಯ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ರಾಯಚೂರು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಭಿಯಂತರ ಬಿ.ಆರ್ ಗೌಡೂರು ನಿವಾಸ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ಮಾಡಿದೆ.
Comments