ಯೂನಿರ್ವಸಲ್ ಹೆಲ್ತ್ ಕೇರ್ ಯೋಜನೆ ಅಡಿ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆ
ಬೆಂಗಳೂರು: ರಾಜ್ಯದಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಎಂದು ವ್ಯತ್ಯಾಸ ಮಾಡದೇ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆಒದಗಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ಯೂನಿರ್ವಸಲ್ ಹೆಲ್ತ್ ಕೇರ್ ಯೋಜನೆ ಅಡಿ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆ ಸಿಗಲಿದೆ. ಸದ್ಯ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಉಚಿತ ಆರೋಗ್ಯ ಸೇವೆ ಸಿಗುತ್ತಿದೆ. ಎಪಿಎಲ್ ಕಾರ್ಡುದಾರರಿಗೆ ಈ ಸೌಲಭ್ಯವಿಲ್ಲ. ಹೀಗಾಗಿ ಎಲ್ಲಾ ವರ್ಗದ ಜನರಿಗೂ ಆರೋಗ್ಯ ಭಾಗ್ಯ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಇದಕ್ಕಾಗಿ ಯೂನಿವರ್ಸಲ್ ಹೆಲ್ತ್ ಕೇರ್ ಯೋಜನೆ ರೂಪಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ಜಾರಿಗೆ ತರಲಾಗುತ್ತದೆ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಸಚಿವರು ತಿಳಿಸಿದರು. ರಾಜ್ಯದಲ್ಲಿ ವೈದ್ಯರ ಕೊರತೆ ಇಲ್ಲ, ಆದರೆ ವೈದ್ಯಕೀಯ ಸಿಬ್ಬಂದಿ, ತಜ್ಞ ವೈದ್ಯರ ಕೊರತೆ ಇದೆ. ವೈದ್ಯಕೀಯ ಹುದ್ದೆಗಳು ಖಾಲಿ ಇದ್ದು, ೧ ತಿಂಗಳ ಒಳಗಾಗಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಸಚಿವ ರಮೇಶ್ ಕುಮಾರ್ ಸದನಕ್ಕೆ ಭರವಸೆ ನೀಡಿದರು.
ಪ್ರಸ್ತುತ ತಜ್ಞ ವೈದ್ಯರಿಗೆ ೧.೨೫ ಲಕ್ಷ ವೇತನ ನಿಗದಿ ಮಾಡಿದ್ದೇವೆ. ಆದರೂ ತಜ್ಞ ವೈದ್ಯರು ಸಿಗುತ್ತಿಲ್ಲ, ಸಂಘಟಿತರಾಗಿರುವ ಕೆಲವೇ ಕೆಲ ಮಂದಿ ಅಸಂಘಟಿತರಾಗಿರುವ ಬಹು ಮಂದಿಯನ್ನು ಶೋಷಿಸುತ್ತಾರೆ. ಆದ ಕಾರಣ ತಜ್ಞ ವೈದ್ಯರ ವೇತನ ೨ ಲಕ್ಷಕ್ಕೆ ಏರಿಸುವ ವಿವಾದಕ್ಕೆ ಒಳಗಾಗಲಾರೆ ಎಂದು ಹೇಳಿದರು.
Comments