ಪ್ರಯಾಣಿಕರು ಮೆಜೆಸ್ಟಿಕ್ನಲ್ಲಿ ಮೆಟ್ರೋ ಬದಲಿಸೋದು ಹೇಗೆ?

ಬೆಂಗಳೂರಿನ ಪೂರ್ವದ ಬೈಯ್ಯಪ್ಪನಹಳ್ಳಿ ಮತ್ತು ಪಶ್ಚಿಮದ ನಾಯಂಡಹಳ್ಳಿ (ಮೈಸೂರು ರಸ್ತೆ) ನಡುವೆ ಮೆಟ್ರೋ ರೈಲು ಈಗಾಗಲೇ ಸಂಚರಿಸುತ್ತಿದ್ದು ಇದೀಗ ದಕ್ಷಿಣದ ಯಲಚೇನಹಳ್ಳಿಯಿಂದ ಉತ್ತರದ ನಾಗಸಂದ್ರದವರೆಗೂ ಮೆಟ್ರೋ ಸಂಚರಿಸಲಿದೆ.
ಬೈಯ್ಯಪ್ಪನಹಳ್ಳಿಯಿಂದ ಬಂದ ಪ್ರಯಾಣಿಕರು ಕೆಂಪೇಗೌಡ ನಿಲ್ದಾಣದಲ್ಲಿಳಿದು ದಕ್ಷಿಣದ ಯಲಚೇನಹಳ್ಳಿಗೋ ಇಲ್ಲಾ ಉತ್ತರದ ನಾಗಸಂದ್ರಕ್ಕೋ ಇತ್ತ ಮೈಸೂರು ರಸ್ತೆಯಿಂದ ಬರುವ ಪ್ರಯಾಣಿಕರು ನ್ಯಾಷನಲ್ ಕಾಲೇಜು ಅಥವಾ ಕೆ.ಆರ್.ಮಾರುಕಟ್ಟೆಕಡೆಗೆ ಹೇಗೆ ಸಂಚರಿಸುವುದು ಎಂಬುದು ಮೊದಲ ದಿನಗಳಲ್ಲಿ ಗೊಂದಲ ಉಂಟುಮಾಡಬಹುದು. ಇದಕ್ಕಾಗಿಯೇ ಕೆಂಪೇಗೌಡ ನಿಲ್ದಾಣ ಬಳಕೆಯ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಆರು ಮಹಾದ್ವಾರಗಳು: ಕೆಂಪೇಗೌಡ ಮೆಟ್ರೋ ನಿಲ್ದಾಣಕ್ಕೆ ಒಟ್ಟು ಆರು ಮಹಾದ್ವಾರಗಳ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಕಡೆಯಿಂದ(ಪಶ್ಚಿಮ), ಉಪ್ಪಾರಪೇಟೆ ಪೊಲೀಸ ಠಾಣೆ-ಚಿಕ್ಕಲಾಲ್‌ಬಾಗ್ ಕಡೆಯಿಂದ (ದಕ್ಷಿಣ), ಸಂಗಂ ಚಿತ್ರಮಂದಿರ ಕಡೆಯಿಂದ(ಪೂರ್ವ) ಹಾಗೂ ಮೆಜೆಸ್ಟಿಕ್ ಬಸ್‌ನಿಲ್ದಾಣ ಕಡೆಯಿಂದ (ಉತ್ತರ) ಮತ್ತೊಂದು ಮಹಾದ್ವಾರಗಳಿವೆ. ಪ್ರಸ್ತುತ ರೈಲ್ವೇ ನಿಲ್ದಾಣ ಮತ್ತು ಚಿಕ್ಕಲಾಲ್‌ಬಾಗ್ ಕಡೆಯಿಂದ ಪ್ರವೇಶಾವಕಾಶವಿದ್ದು ಉಳಿದ ಕಡೆಗಳಲ್ಲಿ ಕಾಮಗಾರಿ ನಡೆದಿದೆ. ಈ ಆರೂ ಮಹಾದ್ವಾರಗಳು ಬೃಹದಾಕಾರದ ಪ್ರಾಂಗಣಕ್ಕೆ ತೆರೆದುಕೊಳ್ಳಲಿದ್ದು ಪ್ರಯಾಣಿಕರು ಯಾವ್ಯಾವ ಕಡೆಗೆ ಪ್ರಯಾಣಿಸಬೇಕೆಂಬುದನ್ನು ಇಲ್ಲೇ ನಿರ್ಧರಿಸಬೇಕಿದೆ.
ಬೈಯ್ಯಪ್ಪನಹಳ್ಳಿ-ನಾಯಂಡಹಳ್ಳಿ: ಪೂರ್ವದ ಬೈಯ್ಯಪ್ಪನಹಳ್ಳಿ ಆಗಲೀ ಪಶ್ಚಿಮದ ನಾಯಂಡಹಳ್ಳಿ ಕಡೆಗಾಗಲೀ ನೇರಳೆ ಮಾರ್ಗದ ಪ್ರದೇಶಗಳಿಗೆ ಪ್ರಯಾಣಿಸಬೇಕಾದ ಪ್ರಯಾಣಿಕರು ನೆಲದಾಳದ 1ನೇ ಹಂತದಲ್ಲಿರುವ ಪ್ಲಾಟ್‌ಫಾರಂ 1 ಅಥವಾ 2ಕ್ಕೆ ಮೆಟ್ಟಿಲುಗಳು ಅಥವಾ ಎಸ್ಕಲೇಟರ್ ಬಳಸಿ ಇಳಿಯಬೇಕು. ಪ್ಲಾಟ್‌ಫಾರಂ 1 ಬೈಯ್ಯಪ್ಪನಹಳ್ಳಿ ಕಡೆಗೂ ಪ್ಲಾಟ್‌ಫಾರಂ 2 ಮೈಸೂರು ರಸ್ತೆ ಕಡೆಗೂ ರೈಲುಗಳು ಸಂಚರಿಸಲಿದೆ.
ಮೊದಲ ದಿನಗಳಲ್ಲಿ ಸಾಕಷ್ಟುಗೈಡ್‌ಗಳನ್ನು ಮಾರ್ಗದರ್ಶನಕ್ಕಾಗಿ ನಿಯೋಜಿಸಲಾಗುತ್ತಿದೆ. ಒಂದೊಮ್ಮೆ ಪ್ರಯಾಣಿಕರು ಗೊಂದಲಕ್ಕೊಳಗಾಗಿ ಬೇರೆ ದಿಕ್ಕಿನಲ್ಲಿ ಪ್ರಯಾಣಿಸಿದರೂ ದಂಡ ವಿಧಿಸಲಾಗುವುದಿಲ್ಲ ಎಂದು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲ ಸ್ಪಷ್ಟಪಡಿಸಿದ್ದಾರೆ.
Comments