ವಿಮಾನ ಪ್ರಯಾಣಕ್ಕೆ ಇನ್ನು ಆಧಾರ್ ಅಥವಾ ಪ್ಯಾನ್ ಕಾರ್ಡ್ ಕಡ್ಡಾಯ
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ಪ್ರಯಾಣ ಅಥವಾ ವಿಮಾನ ಪ್ರಯಾಣ ಟಿಕೆಟ್ ಬುಕಿಂಗ್ ಗೆ ಆಧಾರ್ ಅಥವಾ ಪ್ಯಾನ್ ಕಾರ್ಡ್ ನಂತಹ ಶಾಶ್ವತ ಗುರುತಿನ ಚೀಟಿ ಕಡ್ಡಾಯ ಮಾಡಲು ನಿರ್ಧರಿಸಿದೆ.
ಕೇಂದ್ರ ಸರ್ಕಾರ ರಚನೆ ಮಾಡಿದ್ದ ತಾಂತ್ರಿಕ ಸಮಿತಿಯ ಶಿಫಾರಸ್ಸಿನ ಮೇರೆಗೆ ಇಂತಹುದೊಂದು ನಿಯಮ ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇನ್ನು ಮೂರು ಅಥವಾ ನಾಲ್ಕು ತಿಂಗಳಲ್ಲಿ ದೇಶಾದ್ಯಂತ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ. ಅಂತೆಯೇ ಇನ್ನು 30 ದಿನಗಳೊಳಗೆ ನಿಯಮಕ್ಕೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಲೂ ಕೂಡ ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ ಇನ್ನು ಮುಂದೆ ದೇಶದ ಯಾವುದೇ ಪ್ರಜೆ ಕೂಡ ವಿಮಾನದಲ್ಲಿ ಪ್ರಯಾಣಿಸಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಅಥವಾ ಪಾಸ್ ಪೋರ್ಟ್ ಗಳ ನ್ನು ಗುರುತಿನ ಚೀಟಿಯಾಗಿ ನೀಡಬೇಕು.
ಈ ಬಗ್ಗೆ ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರು, "ವಿಮಾನ ಪ್ರಯಾಣ ಟಿಕೆಟ್ ಬುಕಿಂಗ್ ವೇಳೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಗಳನ್ನು ಗುರುತಿನ ಚೀಟಿಯಾಗಿ ನೀಡಿದರೆ ಅನಗತ್ಯ ದಾಖಲೆಗಳ ಪರಿಶೀಲನೆ ಬೇಕಿರುವುದಿಲ್ಲ. ಅಂತೆಯೇ ಸಮಯ ಉಳಿತಾಯವಾಗಲಿದ್ದು, ಪೇಪರ್ ಲೆಸ್ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ.
ಟಿಕೆಟ್ ಬುಕ್ಕಿಂಗ್ ವೇಳೆ ಪ್ರಯಾಣಿಕ ತನ್ನ ಆಧಾರ್ ಅಥವಾ ಪ್ಯಾನ್ ಕಾರ್ಡ್ ವಿವರ ನೀಡುವುದರಿಂದ ಸಂಪೂರ್ಣ ವಿವರಗಳನ್ನು ಅದರಿಂದಲೇ ಪಡೆಯಬಹುದಾಗಿರುತದೆ. ಅಂತೆಯೇ ಆಧಾರ್ (ಪಿಎನ್ ಆರ್ ಸಹಿತ)ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿದರೆ ಡಿಜಿಟಲ್ ಬೋರ್ಡಿಂಗ್ ಪಾಸ್ ನೀಡಲೂ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಡಿಜಿಟಲ್ ವ್ಯವಸ್ಥೆಯ ಮೂಲಕ ಪ್ರಯಾಣಿಕರು ಕೇವಲ 10ರಿಂದ 15 ನಿಮಿಷಗಳಲ್ಲೇ ಬೋರ್ಡಿಂಗ್ ಪಾಸ್ ಪಡೆಯಬಹುದಾಗಿದೆ ಎಂದು ಜಯಂತ್ ಸಿನ್ಹಾ ಹೇಳಿದ್ದಾರೆ.
Comments