ಸಮಯಪ್ರಜ್ಞೆ ಮೆರೆದ ಪೊಲೀಸ್ ಪೇದೆ ,ತಪ್ಪಿದ ಪ್ರಾಣಹಾನಿ
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಪ್ರಯಾಗ ಬಳಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಪ್ರಾಣ ಹಾನಿಯಾಗದಿರಲು ಪೊಲೀಸ್ ಪೇದೆಯೊಬ್ಬರ ಸಮಯಪ್ರಜ್ಞೆಯೇ ಕಾರಣ ಎಂಬುದು ಬೆಳಕಿಗೆ ಬಂದಿದೆ.
ಹೃಷಿಕೇಶ–ಬದರಿನಾಥ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ವಿಷ್ಣುಪ್ರಯಾಗ ಬಳಿ ಭೂಕುಸಿತ ಸಂಭವಿಸಿತ್ತು. ಈ ಸಂದರ್ಭ, ಆ ಮಾರ್ಗದಲ್ಲಿ ನೂರಾರು ಯಾತ್ರಿಕರು ಬದರಿನಾಥಕ್ಕೆ ತೆರಳುತ್ತಿದ್ದರು.
ಹೆಚ್ಚು ಭೂಕುಸಿತ ಸಂಭವಿಸುವ ಪ್ರದೇಶವಾದ ವಿಷ್ಣುಪ್ರಯಾಗ ಬಳಿ ಹಾಥಿ ಪರ್ವತದಿಂದ ಸಣ್ಣಸಣ್ಣ ಬಂಡೆಗಳು ಕೆಳಗುರುಳುತ್ತಿರುವುದನ್ನು ಪೊಲೀಸ್ ಪೇದೆಯೊಬ್ಬರು ಶುಕ್ರವಾರ ಮಧ್ಯಾಹ್ನ ಗಮನಿಸಿದ್ದರು. ತಕ್ಷಣವೇ ಅವರು ಚಮೋಲಿಯಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಅಲ್ಲದೆ, ಆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚರಿಸುತ್ತಿರುವ ಬಗ್ಗೆಯೂ ಮಾಹಿತಿ ನೀಡಿದ್ದರು. ಇದು ಸಂಭಾವ್ಯ ಅಪಾಯ ತಪ್ಪಿಸಲು ನೆರವಾಯಿತು ಎಂದು ಉತ್ತರಾಖಂಡದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
‘ಮಾಹಿತಿ ತಿಳಿಯುತ್ತಿದ್ದಂತೆ, ಭೂಕುಸಿತ ಆರಂಭವಾಗಿರುವ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಜನರು ಬೇಗನೆ ಅಲ್ಲಿಂದ ತೆರಳಲು ನೆರವು ನೀಡಿದೆವು. ನಂತರ ಆ ಪ್ರದೇಶದಲ್ಲಿ ಸಂಚಾರ ಸ್ಥಗಿತಗೊಳಿಸಲಾಯಿತು’ ಎಂದು ಚಮೋಲಿಯ ಪೊಲೀಸ್ ಸುಪರಿಂಟೆಂಡೆಂಟ್ ತೃಪ್ತಿ ಭಟ್ ತಿಳಿಸಿದ್ದಾರೆ.
ಬಂಡೆಗಳು ಉರುಳಲು ಆರಂಭವಾದ ಬಗ್ಗೆ ಪೊಲೀಸ್ ಪೇದೆ ಮಾಹಿತಿ ನೀಡಿದ ಎರಡೇ ಗಂಟೆಗಳಲ್ಲಿ ಆ ಪ್ರದೇಶದಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments