ಸೈಬರ್ ದಾಳಿ ಹಿನ್ನಲೆ: ಸಾಫ್ಟ್ ವೇರ್ ಅಪ್ ಡೇಟ್ ಬಳಿಕವಷ್ಟೇ ಎಟಿಎಂ ಓಪನ್: ಆರ್ ಬಿಐ ಸೂಚನೆ
ಕಳೆದವಾರ ವಿಶ್ವಾದ್ಯಂತ ನಡೆದಿದ್ದ ವ್ಯಾಪಕ ಸೈಬರ್ ದಾಳಿ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳ ಸಾಫ್ಟ್ ವೇರ್ ಅಪ್ ಡೇಟ್ ಮಾಡುವಂತೆ ಎಲ್ಲ ಬ್ಯಾಂಕ್ ಗಳಿಗೆ ಸೂಚನೆ ರವಾನಿಸಿದೆ.
ವಿಶ್ವಾದ್ಯಂತ ಏಕಕಾಲದಲ್ಲಿ ನಡೆದ ಸೈಬರ್ ದಾಳಿಯಿಂದಾಗಿ ಬ್ಯಾಂಕ್ ಗಳ ಎಟಿಎಂಗಳ ಮೇಲೆ ತೀವ್ರತರ ಪರಿಣಾಮ ಬೀರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎಟಿಎಂ ಗಳಲ್ಲಿನ ಸಿಸ್ಟಮ್ ಅಪ್ ಡೇಟ್ ಕಾರ್ಯಕ್ಕೆ ಆರ್ ಬಿಐ ಸೋಮವಾರ ಸೂಚನೆ ನೀಡಿದೆ. ಈ ಬಗ್ಗೆ ಎಲ್ಲ ಬ್ಯಾಂಕುಗಳಿಗೂ ಸೂಚನೆ ರವಾನಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಎಟಿಎಂ ಗಳ ಸಿಸ್ಟಂ ಅಪ್ ಡೇಟ್ ಆಗುವವರೆಗೂ ಎಟಿಎಂಗಳಿಗೆ ಹಣ ತುಂಬದಂತೆಯೂ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಟಿಎಂಗೆ ಹಣ ತುಂಬಿಸುವ ಕಾರ್ಯ ಸ್ಥಗಿತವಾಗಿದ್ದು, ಮತ್ತೆ ನಗದು ಹಣಕ್ಕಾಗಿ ಹಾಹಾಕಾರ ಏಳುವ ಸಾಧ್ಯತೆ ಕಾಣುತ್ತಿದೆ. ಈಗಾಗಲೇ ಹಲವು ಬ್ಯಾಂಕ್ ಗಳ ಎಟಿಎಂಗಳು ಕಾರ್ಯ ಸ್ಥಗಿತ ಮಾಡಿದ್ದು, ಎಟಿಎಂ ದುರಸ್ತಿಯಲ್ಲಿದೆ ಎಂಬ ಬೋರ್ಡ್ ಗಳು ಸಾಮಾನ್ಯವಾಗಿವೆ. ಸದ್ಯ ದೇಶದಲ್ಲಿರುವ 2.25 ಲಕ್ಷ ಎಟಿಎಂಗಳ ಪೈಕಿ ಶೇಕಡಾ 60% ಎಟಿಎಂಗಳಲ್ಲಿ ಔಟ್ ಡೇಟೆಡ್ ವಿಂಡೋಸ್ ಸಾಫ್ಟ್ವೇರ್ ಅನ್ನು ಬಳಸಲಾಗುತ್ತಿದ್ದು, ಈ ಎಲ್ಲಾ ಎಟಿಎಂಗಳು ಅಪ್ಡೇಟ್ ಆಗೋವರೆಗೆ ಇದೇ ಸ್ಥಿತಿ ಮುಂದುವರೆಯಲಿದೆ.
ಎಟಿಎಂಗಳಲ್ಲಿ ಮತ್ತೆ ನೋ ಕ್ಯಾಶ್ಬೋರ್ಡ್ರಾರಾಜಿಸತೊಡಗಿವೆ. ಸದ್ಯಕ್ಕೆ ಬಳಸಲಾಗ್ತಿರೋ ಎಟಿಎಂಗಳು ಔಟ್ ಡೇಟೆಡ್ ಆಗಿದ್ದು, ಅಪಡೇಟೆಡ್ ವಿಂಡೋಸ್ ಸಾಫ್ಟ್ವೇರ್ ಅಳವಡಿಸುವವರೆಗೆ ಎಟಿಎಂಗಳಿಗೆ ಹಣ ತುಂಬಬಾರದು ಎಂದು ಆರ್ಬಿಐ ತನ್ನ ಅಧೀನ ಬ್ಯಾಂಕ್ಗಳಿಗೆ ತಾಕೀತು ಮಾಡಿದೆ. ಇದಕ್ಕೂ ಮೊದಲು ಅಂದರೆ ಸೈಬರ್ ದಾಳಿ ನಡೆದ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಮೈಕ್ರೋಸಾಫ್ಟ್ ಸಂಸ್ಥೆ ವಿಂಡೋಸ್ ಎಕ್ಸ್ ಪಿಯ ಅಪ್ ಡೇಟೆಡ್ ಸಾಫ್ಟ್ ವೇರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸಿಸ್ಟಂ ಅಪ್ ಡೇಟ್ ಮಾಡುವಂತೆ ತನ್ನ ಗ್ರಾಹಕರಿಗೆ ಸಲಹೆ ನೀಡಿದೆ.
ಗ್ರಾಹಕರೇ ಚಿಂತೆ ಬೇಡ ದಾಖಲೆ ಭದ್ರವಾಗಿದೆ : ಆರ್ ಬಿಐ
ಇನ್ನು ಸೈಬರ್ ದಾಳಿ ಬೆನ್ನಲ್ಲೇ ಬ್ಯಾಂಕ್ ಗ್ರಾಹಕರ ಖಾತೆಗೂ ಕನ್ನ ಹಾಕಲಾಗಿದೆ ಎಂಬ ಊಹಾಪೋಹಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಆರ್ ಬಿಐ, ಗ್ರಾಹಕರ ದಾಖಲೆಗಳು ಸುರಕ್ಷಿತವಾಗಿದ್ದು, ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಸಾಫ್ಟ್ ವೇರ್ ಅಪ್ ಡೇಟ್ ಬಳಿಕ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದೆ.
ಈ ಹಿಂದೆ ಆಂಧ್ರ ಪ್ರದೇಶದ 102 ಕಂಪ್ಯೂಟರ್ ಗಳು ಸೈಬರ್ ದಾಳಿಗೆ ತುತ್ತಾಗಿದ್ದವು. ಅಂತೆಯೇ ಖ್ಯಾತ ಕಾರು ತಯಾರಿಕಾ ಸಂಸ್ಥೆ ನಿಸ್ಸಾನ್ ರೆನಾಲ್ಟ್ ಘಟಕ ಕೂಡ ಮಾಲ್ವೇರ್ ದಾಳಿಯಿಂದಾಗಿ ಕೆಲಕಾಲ ಸ್ಥಗಿತಗೊಂಡಿತ್ತು.
Comments