ನೇತ್ರದಾನ ಮಾಡಿ ಸಂತಸ ಹಂಚಿಕೊಂಡ ‘ಸರಿಗಮಪ’ ತಂಡ..

ಸಾಮಾನ್ಯವಾಗಿ ಮನೆಯಲ್ಲಿ ಒಂದು ಕ್ಷಣ ಕರೆಂಟ್ ಹೋದರೆ ಸಾಕು ಕತ್ತಲಲ್ಲಿ ಅಯ್ಯೋ ದೇವರೆ ಅಂತಾ ಯೋಚನೆ ಮಾಡುತ್ತಿರುತ್ತೇವೆ.. ಜೀವನ ಪೂರ್ತಿ ಕತ್ತಲೆಲಿ ಇರಬೇಕು ಅಂದ್ರೆ ಹೇಗೆ ಹೇಳಿ… ಈ ಪ್ರಪಂಚದಲ್ಲಿ ಎಷ್ಟು ಜನ ಅಂಧರೂ ಇದ್ದಾರೋ ಗೊತ್ತಿಲ್ಲ… ಅವರಿಗೆ ಬೆಳಕು ಸಿಗುವುದು ಇನ್ನೊಬ್ಬರ ಕಣ್ಣಿಗಳಿಂದ ಮಾತ್ರ.. ಸತ್ತ ನಂತರ ಮಣ್ಣಿನಲ್ಲಿ ಕಣ್ಣು ಹಾಳಾಗುವ ಬದಲು, ಆ ಕಣ್ಣು ಮತ್ತೊಬ್ಬರ ಬಾಳಿಗೆ ಬೆಳಕಾಗುವುದು ಎಷ್ಟು ಮಹತ್ವದ ಕೆಲಸ ಅಲ್ವ… ಈ ರೀತಿ ನೇತ್ರದಾನ ಮಾಡಲು ಕರ್ನಾಟಕದಲ್ಲಿ ದೊಡ್ಡ ಸ್ಫೂರ್ತಿ ನೀಡಿದವರು ಎಂದರೆ ಅದು ಡಾ ರಾಜ್ ಕುಮಾರ್.
ಅಣ್ಣಾವ್ರು ಕಣ್ಣನ್ನು ದಾನ ಮಾಡಿದ ಮೇಲೆ ಅವರ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಜನರು ನೇತ್ರದಾನ ಮಾಡಿದ್ದಾರೆ.. ನೇತ್ರದಾನ ಮಹಾದಾನ ಎಂದು ಡಾ.ರಾಜ್ ಯಾವಾಗಲೂ ಹೇಳುತ್ತಿದ್ದರು. ಅದರಂತೆ ಅವರ ಅಭಿಮಾನಿಗಳು ಕೂಡ ನಡೆದುಕೊಳ್ಳುತ್ತಿದ್ದಾರೆ. ಈಗಲೂ ಆ ಕೆಲಸ ಮುಂದುವರೆಯುತ್ತದೆ. ಇದೀಗ ಸರಿಗಮಪ ಕಾರ್ಯಕ್ರಮ ಕೂಡ ಅಂಧರ ಬಾಳಿನಲ್ಲಿ ಬೆಳಕು ನೀಡುವ ಕೆಲಸ ಮಾಡಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸರಿಗಮಪ' ಕಾರ್ಯಕ್ರಮದ ತಂಡ ಒಂದು ಒಳ್ಳೆಯ ಕೆಲಸ ಮಾಡಿದೆ. ಇಡೀ ಸರಿಗಮಪ ತಂಡ ನೇತ್ರದಾನ ಮಾಡಿದೆ.
ರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಈ ಕಾರ್ಯವನ್ನು ಸರಿಗಮಪ ತಂಡ ಮಾಡಿದೆ. ಕಾರ್ಯಕ್ರಮ ಜ್ಯೂರಿಯಾಗಿರುವ ಗಾಯಕಿ ಸಂಗೀತಾ ಎಸ್ ರಾಜೀವ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ತಾವು ಕೂಡ ತಮ್ಮ ಸರಿಗಮಪ ತಂಡದ ಜೊತೆ ಸೇರಿ ನೇತ್ರದಾನ ಮಾಡಿದ್ದಾರೆ. ಇಂತಹ ಮಹತ್ವದ ಕೆಲಸ ಮಾಡಿಸಿದ ಜೀ ಕನ್ನಡ ವಾಹಿನಿಗೆ ಧನ್ಯವಾದ ತಿಳಿಸಿರುವ ಅವರು, ಇತರರಿಗೂ ನೇತ್ರದಾನ ಮಾಡಿ ಎಂದು ಮನವಿ ಮಾಡಿದ್ದಾರೆ. ಮಣ್ಣಲ್ಲಿ ಕಣ್ಣು ನಾಶವಾಗುವುದಕ್ಕಿಂತ ಇನ್ನೊಬ್ಬರ ಬಾಳಿಗೆ ಬೆಳಕಾದರೆ ಎಷ್ಟು ಚಂದ ಅಲ್ವ…ನೀವು ಕೂಡ ನೇತ್ರದಾನ ಮಾಡಿ ಇತರರಿಗೂ ಕೂಡ ತಿಳಿಸಿ…
Comments