ಮಜಾ ಟಾಕೀಸ್ ಸೃಜನ್ ಮೇಲೆ ಇದೆಂಥಾ ಆರೋಪ..!?
ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಪ್ರಖ್ಯಾತಿ ಪಡೆದಿರುವ ಕಾಮಿಡಿ ರಿಯಾಲಿಟಿ ಶೋಗಳ ಪೈಕಿ ‘ಮಜಾ ಟಾಕೀಸ್’ ಕೂಡ ಒಂದು. 2015 ರಲ್ಲಿ ಶುರುವಾದ ಈ ‘ಮಜಾ ಟಾಕೀಸ್’ ಕಾರ್ಯಕ್ರಮಕ್ಕೆ ಇಂದು ಸಿಕ್ಕಾಪಟ್ಟೆ ಫ್ಯಾನ್ ಫಾಲೋವಿಂಗ್ ಇದೆ. ‘ಮಜಾ ಟಾಕೀಸ್’ ಮೊದಲ ಆವೃತ್ತಿ ಮುಕ್ತಾಯಗೊಂಡಾಗ, ‘‘ಮತ್ತೆ ಮಜಾ ಟಾಕೀಸ್ ಓಪನ್ ಮಾಡಿ” ಎಂಬ ಕೂಗು ವೀಕ್ಷಕರಿಂದಲೇ ಕೇಳಿಬಂದಿತ್ತು. ವೀಕ್ಷಕರ ಒತ್ತಾಯದ ಮೇರೆಗೆ ಸದ್ಯ ಕಲರ್ಸ್ ಸೂಪರ್ ವಾಹಿನಿಯಲ್ಲಿ ‘ಮಜಾ ಟಾಕೀಸ್’ ಎರಡನೇ ಆವೃತ್ತಿ ಪ್ರಸಾರ ಆಗುತ್ತಿದೆ. ‘ಮಜಾ ಟಾಕೀಸ್’ ಶೋಗೆ ಈಗಲೂ ಟಿ.ಆರ್.ಪಿ ಬೊಂಬಾಟ್ ಆಗಿದೆ.
ಪ್ರತಿ ವಾರ ‘ಮಜಾ ಟಾಕೀಸ್’ ಮನೆಗೆ ಯಾರಾದರೂ ಅತಿಥಿ ಬರ್ತಾರೆ, ಅತಿಥಿಗಳ ಸಮ್ಮುಖದಲ್ಲಿ ಕುರಿ ಪ್ರತಾಪ್, ಮುತ್ತುಮಣಿ, ಪವನ್, ರಾಣಿ, ಒನ್ ಅಂಡ್ ಒನ್ಲಿ ವರಲಕ್ಷ್ಮಿ ಮಾಡುವ ತಮಾಷೆ, ತರ್ಲೆ ವೀಕ್ಷಕರಿಗೆ ಸಖತ್ ಇಷ್ಟವಾಗಿದೆ. ಇನ್ನೂ ಕನ್ನಡ ಸಿನಿಮಾಗಳ ಪಾಲಿಗೆ ‘ಮಜಾ ಟಾಕೀಸ್’ ಬೃಹತ್ ವೇದಿಕೆ. ಯಾಕಂದ್ರೆ, ಹೆಚ್ಚು ಟಿ.ಆರ್.ಪಿ ಹೊಂದಿರುವ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಿರುವ, ಬಿಡುಗಡೆಯ ಹೊಸ್ತಿಲಲ್ಲಿ ಇರುವ ಕನ್ನಡ ಸಿನಿಮಾ ತಂಡಗಳು ಭಾಗವಹಿಸಿದರೆ, ಚಿತ್ರಕ್ಕೆ ಸಿಕ್ಕಾಪಟ್ಟೆ ಪಬ್ಲಿಸಿಟಿ ಸಿಕ್ಕ ಹಾಗೆ.! ಹೀಗಿರುವಾಗಲೇ, ‘ಮಜಾ ಟಾಕೀಸ್’ ಹಾಗೂ ಸೃಜನ್ ಲೋಕೇಶ್ ಮೇಲೆ ಒಂದು ಗಂಭೀರ ಆರೋಪ ಕೇಳಿಬಂದಿದೆ.
ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಹಳ್ಳಿ ಹಳ್ಳಿಗೂ ಹೋಗಿ ತಮ್ಮ ಸಿನಿಮಾದ ಕುರಿತು ಪ್ರಚಾರ ಮಾಡಲು ಯಾರಿಗೂ ಸಾಧ್ಯ ಇಲ್ಲ. ಆದ್ರೆ, ‘ಮಜಾ ಟಾಕೀಸ್’ ಕಾರ್ಯಕ್ರಮಕ್ಕೆ ಸಿಟಿಯಿಂದ ಹಿಡಿದು ಹಳ್ಳಿಯವರೆಗೂ ಅಭಿಮಾನಿ ವಲಯ ದೊಡ್ಡದಿದೆ. ಹೀಗಾಗಿ, ‘‘ಮಜಾ ಟಾಕೀಸ್’ ನಲ್ಲಿ ನಮ್ಮ ಸಿನಿಮಾ ಪ್ರಮೋಟ್ ಆದರೆ ಹೆಚ್ಚು ಜನರಿಗೆ ರೀಚ್ ಆಗಬಹುದು” ಅನ್ನೋದು ಎಷ್ಟೋ ಕನ್ನಡ ಸಿನಿಮಾ ತಂಡಗಳ ಲೆಕ್ಕಾಚಾರ.ಆದ್ರೆ, ‘‘ಮಜಾ ಟಾಕೀಸ್’ ನಲ್ಲಿ ಸಿನಿಮಾ ಪ್ರಮೋಷನ್ ಫ್ರೀ ಆಗಿ ಮಾಡಲ್ಲ. ದುಡ್ಡು ತೆಗೆದುಕೊಳ್ತಾರೆ” ಎಂಬ ಆರೋಪ ಇತ್ತೀಚೆಗಷ್ಟೇ ಕೇಳಿ ಬಂದಿತ್ತು. ಹಾಗಾದ್ರೆ, ಕನ್ನಡ ಸಿನಿಮಾಗಳನ್ನ ಪ್ರಮೋಟ್ ಮಾಡೋಕೆ ಸೃಜನ್ ಲೋಕೇಶ್ ಅಥವಾ ಲೋಕೇಶ್ ಪ್ರೊಡಕ್ಷನ್ಸ್ ದುಡ್ಡು ಕೇಳ್ತಾರಾ.? ‘‘ಮಜಾ ಟಾಕೀಸ್’ಗೆ ಬರುವ ಸಿನಿಮಾ ತಂಡಗಳು ಮಾತ್ರ ಅಲ್ಲ, ಅಲ್ಲಿ ಕೂರಲು ಬರುವ ಆಡಿಯನ್ಸ್ ಕೂಡ ದುಡ್ಡು ಕೊಡಬೇಕು” ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ಈ ಎಲ್ಲ ಆರೋಪಕ್ಕೂ ಸೃಜನ್ ಲೋಕೇಶ್ ‘ಮಜಾ ಟಾಕೀಸ್’ನಲ್ಲಿಯೇ ಸ್ಪಷ್ಟ ಪಡಿಸಿದ್ದಾರೆ. ‘ಮಜಾ ಟಾಕೀಸ್’ಗೆ ಸಿನಿಮಾದವರು ಬಂದು ಪ್ರಮೋಟ್ ಮಾಡೋಕೆ ಚಾನೆಲ್ ಅಥವಾ ಲೋಕೇಶ್ ಪ್ರೊಡಕ್ಷನ್ಸ್ ದುಡ್ಡು ತೆಗೆದುಕೊಳ್ತಾರೆ ಎಂಬ ಮಾತುಗಳು ಬಂದಿವೆ. ಈ ಬಗ್ಗೆ ಇವತ್ತು ಈ ಸಂಚಿಕೆ ಮೂಲಕ ನಾನು ಸ್ಪಷ್ಟ ಪಡಿಸಲು ಇಚ್ಛಿಸುತ್ತೇನೆ. ‘ಮಜಾ ಟಾಕೀಸ್’ಗೆ ಬರುವ ಸಿನಿಮಾದವರಿಗೆ ಅಥವಾ ಆಡಿಯನ್ಸ್ ಆಗಿ ಕುಳಿತುಕೊಳ್ಳುವವರಿಗೆ ಯಾವುದೇ ಟಿಕೆಟ್ ಇಲ್ಲ. ಸಿನಿಮಾ ಪ್ರಮೋಷನ್ ಗೆ ನಾವು ದುಡ್ಡು ತೆಗೆದುಕೊಳ್ಳುತ್ತಿಲ್ಲ” ಎಂದಿದ್ದಾರೆ ಸೃಜನ್ ಲೋಕೇಶ್.‘‘ದಯವಿಟ್ಟು ಇದನ್ನ ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಿ. ಯಾರಾದರೂ, ಯಾವಾಗಲಾದರೂ, ”ನನಗೆ ಸೃಜನ್ ಗೊತ್ತು. ಚಾನೆಲ್ ನವರು ಗೊತ್ತು. ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ಪರಿಚಯ ಇದ್ದಾರೆ. ಅವರಿಗೆ ದುಡ್ಡು ಕೊಟ್ಟರೆ, ಸಿನಿಮಾ ಪ್ರಮೋಷನ್ ಮಾಡ್ತಾರೆ” ಅಂತ ಹೇಳಿದರೆ ದಯವಿಟ್ಟು ನಂಬಬೇಡಿ. ಇದು ಶುದ್ಧ ಸುಳ್ಳು”. ‘‘ನಾವು ಯಾವುದೇ ಸಿನಿಮಾ ತಂಡದಿಂದ ದುಡ್ಡು ತೆಗೆದುಕೊಂಡಿಲ್ಲ. ಇಲ್ಲಿ ಬರುವ ಆಡಿಯನ್ಸ್ ರಿಂದಲೂ ನಾವು ದುಡ್ಡು ತೆಗೆದುಕೊಳ್ಳುವುದಿಲ್ಲ. ದಯವಿಟ್ಟು ಈ ತರಹ ಸುಳ್ಳು ಮಾಹಿತಿಗೆ ಬಲಿಯಾಗಬೇಡಿ. ಇದು ನನ್ನ ಮನವಿ” ಅಂತ ಸ್ವತಹ ಸೃಜನ್ ಲೋಕೇಶ್ ಅವರೇ ಹೇಳಿದ್ದಾರೆ.
Comments