ರಾಜಮೌಳಿ ಕಣ್ಣು ಇದೀಗ ನಿಖಿಲ್ ಕುಮಾರಸ್ವಾಮಿಯತ್ತ...!!



ಹೌದು, ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಜೆಡಿಎಸ್ ರಾಜ್ಯಾದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ನಿಖಿಲ್ ಕುಮಾರ್ ಸ್ವಾಮಿ ಕೂಡ ಸುದೀಪ್ ಜೊತೆಯಲ್ಲಿದ್ದರು. ಹೀಗಾಗಿ, ಈ ಭೇಟಿಯ ಬಗ್ಗೆ ದೊಡ್ಡ ಮಟ್ಟದ ಕುತೂಹಲ ಇತ್ತು. ಈ ಭೇಟಿಯ ನಂತರ ನಿಖಿಲ್ ಬಗ್ಗೆ ಒಂದು ಸುಳಿವು ಸಿಕ್ಕಿದೆ.
ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರ್ ಗೆ ತೆಲುಗು ನಿರ್ದೇಶಕ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬು ಸುದ್ದಿ ಈಗ ಟ್ವಿಟ್ಟರ್ ನಲ್ಲಿ ಚರ್ಚೆಯಾಗುತ್ತಿದೆ. ನಿಖಿಲ್ ಕುಮಾರ್ ಅವರ ಫ್ಯಾನ್ಸ್ ಕ್ಲಬ್ ಗಳೇ ಈ ಸುದ್ದಿಯ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಆದ್ರೆ, ಇತ್ತೀಚಿಗಷ್ಟೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಗೆ ಕಿಚ್ಚ ಸುದೀಪ್ ಭೇಟಿ ನೀಡಿದ್ದರು. ಈ ವೇಳೆ ರಾಜಮೌಳಿ ಜೊತೆ ನಿಖಿಲ್ ಸಿನಿಮಾ ಮಾಡುವ ಬಗ್ಗೆ ಪ್ರಸ್ತಾಪವಾಗಿದೆ ಎನ್ನಲಾಗಿದೆ. ಅಲ್ಲಿಂದ ಈ ಸುದ್ದಿ ವೈರಲ್ ಆಗಿದ್ದು, ಈಗ ಟ್ವಿಟ್ಟರ್ ನಲ್ಲಿ ದೊಡ್ಡ ಡಿಬೆಟ್ ಆಗ್ತಿದೆಯಂತೆ.
ಇನ್ನೊಂದು ಕಡೆ ಕಿಚ್ಚ ಸುದೀಪ್ ಅವರು ನಿಖಿಲ್ ಕುಮಾರ್ ಅವರ ಜೊತೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ. ಇವರಿಬ್ಬರ ಜುಗಲ್ ಬಂದಿಯಲ್ಲಿ ಬಹುದೊಡ್ಡ ಪ್ರಾಜೆಕ್ಟ್ ವೊಂದು ಸೆಟ್ಟೇರಲಿದೆ. ಇದಕ್ಕೆ ಕುಮಾರಸ್ವಾಮಿ ಅವರೇ ಬಂಡವಾಳ ಕೂಡ ಹಾಕಲಿದ್ದಾರೆ. ನಿಖಿಲ್ ಅಭಿನಯದ ಮೊದಲ ಚಿತ್ರಕ್ಕೆ ರಾಜಮೌಳಿ ಅವರ ತಂದೆ ವಿಜೇಂದ್ರ ಪ್ರಸಾದ್ ಕಥೆ ಬರೆದಿದ್ದರು. ರಾಜಮೌಳಿಯ ಅಸಿಸ್ಟಂಟ್ ಮಹದೇವ ಆಕ್ಷನ್ ಕಟ್ ಹೇಳಿದ್ದರು. ಕನ್ನಡದ ಜೊತೆ ತೆಲುಗಿನಲ್ಲೂ ಜಾಗ್ವಾರ್ ಸಿನಿಮಾ ಬಿಡುಗಡೆಯಾಗಿತ್ತು. ಹೀಗಾಗಿ, ರಾಜಮೌಳಿ ಮತ್ತು ತೆಲುಗು ಇಂಡಸ್ಟ್ರಿಯ ಜೊತೆ ನಿಖಿಲ್ ಸಂಬಂಧ ಚೆನ್ನಾಗಿದೆ. ಮೊದಲ ಸಿನಿಮಾದ ಮೂಲಕ ಟಾಲಿವುಡ್ ಮಂದಿಯನ್ನ ಕೂಡ ಆಕರ್ಷಿಸಿದ್ದಾರೆ ನಿಖಿಲ್.
Comments