ದಕ್ಷಿಣ ಭಾರತದ ಹಿರಿಯ ನಿರ್ದೇಶಕ ಸಿ.ವಿ. ರಾಜೇಂದ್ರನ್ ನಿಧನ

ದಕ್ಷಿಣ ಭಾರತದ ಹಿರಿಯ ಖ್ಯಾತ ನಿರ್ದೇಶಕ ಸಿ.ವಿ. ರಾಜೇಂದ್ರನ್ ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ರಾಜೇಂದ್ರನ್‌ಗೆ 81 ವರ್ಷ ವಯಸ್ಸಾಗಿತ್ತು. ಅವರು ಬಹಳ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಕನ್ನಡದ ಕಿಟ್ಟು ಪುಟ್ಟು, ಸಿಂಗಪುರ್‌ನಲ್ಲಿ ರಾಜಾಕುಳ್ಳ, ಪ್ರೀತಿ ಮಾಡು ತಮಾಷೆ ನೋಡು, ಗಲಾಟೆ ಸಂಸಾರ ಹಾಗೂ ಇನ್ನಿತರ ಸಿನಿಮಾಗಳನ್ನು ರಾಜೇಂದ್ರನ್ ನಿರ್ದೇಶಿಸಿದ್ದರು. ಮೂಲತ: ತಮಿಳಿನವರಾದರೂ ತಮಿಳು, ಕನ್ನಡ ಸೇರಿದಂತೆ ಹಿಂದಿ, ತೆಲುಗು, ಮಲಯಾಳಂನ ಬಹಳ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ತಮಿಳಿನಲ್ಲಿ ಶಿವಾಜಿ ಗಣೇಶನ್, ಜೈ ಶಂಕರ್, ರಜನಿಕಾಂತ್, ಕಮಲಹಾಸನ್ ಸೇರಿದಂತೆ ಬಹುತೇಕ ಹಿರಿಯ ನಟರೊಂದಿಗೆ ರಾಜೇಂದ್ರನ್ ಕಾರ್ಯ ನಿರ್ವಹಿಸಿದ್ದರು.
ಕನ್ನಡದಲ್ಲಿ ಕೂಡಾ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ದ್ವಾರಕೀಶ್, ಶಂಕರ್ ನಾಗ್, ವಿ. ರವಿಚಂದ್ರನ್, ಶ್ರೀನಾಥ್ ಹಾಗೂ ಇನ್ನಿತರ ನಟರೊಂದಿಗೆ ಸಿ.ವಿ. ರಾಜೇಂದ್ರನ್ ಕೆಲಸ ಮಾಡಿದ್ದಾರೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆ ರಾಜೇಂದ್ರನ್ ಅವರಿಗೆ ಕಳೆದ ವರ್ಷ ಚೆನ್ನೈನ 'ನಾಡಿಗರ್ ತಿಲಗಮ್ ಫ್ಯಾನ್ಸ್ ಅಸೋಸಿಯೇಶನ್' ನಿಂದ ಗೌರವಿಸಲಾಗಿತ್ತು. ರಾಜೇಂದ್ರನ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Comments