'ಮಫ್ತಿ' 100 ಡೇಸ್ : ಸೆಂಚುರಿ ಬಾರಿಸಿದ ಸೆಂಚುರಿ ಸ್ಟಾರ್ ಶಿವಣ್ಣ

ಇಂದಿನ ದಿನಗಳಲ್ಲಿ ಒಂದು ಸಿನಿಮಾ 25 ದಿನ ಓಡುವುದೇ ದೊಡ್ಡ ಮಾತು. ಕೆಲವು ಸಿನಿಮಾಗಳು ಅದನ್ನು ದಾಟಿ 50 ದಿನಗಳ ಕಾಲ ಚಿತ್ರಮಂದಿರದಲ್ಲಿ ಇರುತ್ತದೆ. ಆದರೆ ಬೆರಳೆಣೆಕೆಯ ಸಿನಿಮಾಗಳು ಮಾತ್ರ 100 ದಿನ ಪೂರೈಸುತ್ತೆ. ಸದ್ಯ ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಅವರ 'ಮಫ್ತಿ' ಸಿನಿಮಾ ಸೆಂಚುರಿ ಬಾರಿಸಿದೆ.
ಡಿಸೆಂಬರ್ 1ಕ್ಕೆ ಬಿಡುಗಡೆಯಾದ 'ಮಫ್ತಿ' ಸಿನಿಮಾ ಮಾರ್ಚ್ 10 ಕ್ಕೆ ಅಂದರೆ ನಾಳೆಗೆ ನೂರು ದಿನಗಳನ್ನು ಕಂಪ್ಲೀಟ್ ಮಾಡಲಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ 'ಮಫ್ತಿ' 100 ಡೇಸ್ ಪೋಸ್ಟರ್ ಗಳನ್ನು ಹಾಕಿ ಸಂಭ್ರಮವನ್ನು ಶುರು ಮಾಡಿದ್ದಾರೆ. ಅಂದಹಾಗೆ, 100 ದಿನ ಆದ ನಂತರ ಸಿನಿಮಾದ ಶತದಿನ ಕಾರ್ಯಕ್ರಮವನ್ನು ಸದ್ಯಕ್ಕೆ ಮಾಡುವ ಪ್ಲಾನ್ ಇಲ್ಲವಂತೆ. ಈ ಹಿಂದೆ 50 ದಿನದ ಸಂಭ್ರಮಾಚರಣೆಯನ್ನು ಕೂಡ ಸಿಂಪಲ್ ಆಗಿ ಚಿತ್ರತಂಡ ಮಾಡಿತ್ತು. ಸದ್ಯ 'ಮಫ್ತಿ' ಸಿನಿಮಾ ಬೆಂಗಳೂರಿನ ಓರಯಾನ್ ಮಾಲ್ ಸೇರಿದಂತೆ ಕೆಲವು ಚಿತ್ರಮಂದಿರದಲ್ಲಿ ಪ್ರದರ್ಶನ ಆಗುತ್ತಿದೆ. ಮಾರ್ಚ್ 15 ರಂದು ಸಿನಿಮಾ ಅಮೇರಿಕಾದಲ್ಲಿ ಬಿಡುಗಡೆಯಾಗಲಿದೆ. ಫೆಬ್ರವರಿ ತಿಂಗಳಿನಲ್ಲಿ ಸಿನಿಮಾ ಸಿಡ್ನಿ ಮತ್ತು ಮೊಲ್ಬೋರ್ನ್ ನಲ್ಲಿ ರಿಲೀಸ್ ಆಗಿತ್ತು. ಅಂದಹಾಗೆ, 'ಮಫ್ತಿ' ಚಿತ್ರವನ್ನು ನರ್ತನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಿಂದ ನಿರ್ಮಾಪಕ ಜಯಣ್ಣ ಅವರ ಜೋಳಿಗೆ ತುಂಬಿದೆ.
Comments