ಬಿಗ್ ಸ್ಟಾರ್ ಗಳ ಮಸ್ತ್ ಲುಕ್ ನ ಹಿಂದಿದೆ ಇವರ ಕೈಚಳಕ
ಇಂದು ವಿಶ್ವ ಮಹಿಳಾ ದಿನಾಚರಣೆ. ಇದೇ ವಿಶೇಷ ಸಂದರ್ಭದಲ್ಲಿ ಚಂದನವನದ ಅಂದವಾಗಿ ಕಾಣುವ ಸ್ಟಾರ್ ಗಳ ಹಿಂದಿರುವುದು ಮಹಿಳೆಯರು ಎನ್ನುವ ವಿಚಾರ ಅದೆಷ್ಟೋ ಜನರಿಗೆ ತಿಳಿದೇ ಇಲ್ಲ. ಹೌದು ಕನ್ನಡ ಸಿನಿಮಾರಂಗದ ಬಿಗ್ ಸ್ಟಾರ್ ಗಳು ಸುಂದರವಾಗಿ ಕಾಣುವಂತೆ ಮಾಡುವುದು ಅವರ ಡಿಸೈನರ್ಸ್.
ಸಾಕಷ್ಟು ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಕಾಸ್ಟ್ಯೂಮ್ಸ್ ಡಿಸೈನರ್ ಅನ್ನುವ ಪರಿಕಲ್ಪನೆಯೇ ಇರಲಿಲ್ಲ. ಆದರೆ ದಿನ ಕಳೆದಂತೆ ಚಿತ್ರರಂಗವೂ ಬದಲಾಗುತ್ತಾ ಬರುತ್ತಿದೆ ಹೊಸ ಹೊಸ ಕಲಾವಿದರ ಅಲೆ ಹೆಚ್ಚಾಗುತ್ತಿದೆ ಹಾಗೆಯೇ ಕಾಸ್ಟ್ಯೂಮ್ಸ್ ಡಿಸೈನರ್ಸ್ ಎನ್ನುವ ಕಲ್ಪನೆಯೂ ಚಾಲ್ತಿಯಲ್ಲಿ ಬಂದಿದೆ. ವಿಶೇಷ ಅಂದರೆ ಕನ್ನಡ ಸಿನಿಮಾರಂಗದಲ್ಲಿ ಸ್ಟಾರ್ ಗಳಿಗೆ ವಸ್ತ್ರವನ್ನ ವಿನ್ಯಾಸ ಮಾಡುವ ಹೆಚ್ಚಿನವರು ಹೆಣ್ಣುಮಕ್ಕಳು ಎನ್ನುವ ವಿಚಾರವೇ ಸಂತೋಷ ತರುವಂತದ್ದು. ತೆರೆ ಮೇಲೆ ತಮ್ಮ ಸ್ಟಾರ್ ಗಳನ್ನ ನೋಡಿ ಎಷ್ಟು ಚೆನ್ನಾಗಿರುವ ಬಟ್ಟೆ ಹಾಕಿದ್ದಾರೆ ಎಂದು ಹೊಗಳುವಂತೆ ಮಾಡುವುದು ಇದೇ ವಿನ್ಯಾಸಕಿಯರು.
ಸದ್ಯ ಕನ್ನಡ ಸಿನಿಮಾರಂಗದಲ್ಲಿ ಸ್ಟಾರ್ ತಾರಾ ಜೋಡಿ ಅಂದರೆ ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ . ಇವರಿಬ್ಬರನ್ನು ತೆರೆ ಮೇಲೆ ಸುಂದರವಾಗಿ ಕಾಣುವಂತೆ ಮಾಡುವುದು ವಸ್ತ್ರ ವಿನ್ಯಾಸಕಿ ಸಾನಿಯಾ ಸರ್ದಾರಿಯಾ. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಪತ್ನಿ ಆಗಿರುವ ಸಾನಿಯಾ ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೇವಲ ಯಶ್ , ರಾಧಿಕಾ ಮಾತ್ರವಲ್ಲದೆ ರಾಜ್ ಕುಮಾರ್ ಕುಟುಂಬದ ಕಲಾವಿದರಿಗೂ ಸಾನಿಯಾ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಪವಿತ್ರ ರೆಡ್ಡಿ ಈಗಿನ ಟ್ರೆಂಡ್ ಗೆ ತಕ್ಕಂತೆ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವಸ್ತ್ರ ವಿನ್ಯಾಸಕಿ. ರಾಧಿಕಾ ಪಂಡಿತ್, ಯಶ್, ಐಂದ್ರಿತಾ, ಲೂಸ್ ಮಾದ ಯೋಗಿ, ಧ್ರುವಾ ಸರ್ಜಾ, ದುನಿಯಾ ವಿಜಿ, ಹರಿಪ್ರಿಯಾ ಹೀಗೆ ಸಾಕಷ್ಟು ಸ್ಟಾರ್ ಗಳ ಚಿತ್ರಗಳಿಗೆ ಪವಿತ್ರ ವಸ್ತ್ರ ವಿನ್ಯಾಸ ಮಾಡಿದ್ದಾರೆ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಿಗೆ ಪವಿತ್ರ ಕೆಲಸ ಮಾಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಅವರ ಸಿನಿಮಾಗಳಿಗೆ ದೀಪಾ ಪ್ರಶಾಂತ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದಾರೆ. ರಚಿತಾ ರಾಮ್, ಭಾವನಾ ಇನ್ನೂ ಅನೇಕರು ಇವರು ಮಾಡಿದ ಡಿಸೈನರ್ ಬಟ್ಟೆಗಳನ್ನ ಧರಿಸಿ ಮಿಂಚಿದ್ದಾರೆ. ಸದ್ಯ ದೀಪಾ, ಶಿವರಾಜ್ ಕುಮಾರ್ ನಡೆಸಿಕೊಡುತ್ತಿರುವ ಯಾರಿ ನಂ 1 ಶೋ ಗೆ ದೀಪಾ ಅವರೇ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರನ್ನ ಸಿನಿಮಾಗಳಲ್ಲಿ ನೋಡಿ ಖಾಸಗಿ ಕಾರ್ಯಕ್ರಮಗಳಲ್ಲಿ ನೋಡಿ ಅವರಂತೆಯೇ ಡ್ರಸ್ ಮಾಡಿಕೊಳ್ಳುವವರು ಅದೆಷ್ಟೋ ಜನರಿದ್ದಾರೆ. ಕಿಚ್ಚ ಅಷ್ಟೊಂದು ಸುಂದರವಾಗಿ ಕಾಣುವಂತೆ ಮಾಡುವ ಕೆಲಸ ವಸ್ತ್ರ ವಿನ್ಯಾಸಕಿ ಅರ್ಚನಾ ಅವರದ್ದು. ಪರ್ಸನಲ್ ಹಾಗೂ ಪ್ರೊಫೆಷನಲ್ ಆಗಿ ಅರ್ಚನಾ ಕಿಚ್ಚ ಸುದೀಪ್ ಅವರ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶಚಿನಾ ಹೆಗ್ಗಾರ್ ಅನಂತ್ ನಾಗ್ ಅವರಿಂದ ಹಿಡಿದು ಈಗಿನ ಧನಂಜಯ ವರೆಗೂ ಸಾಕಷ್ಟು ಕಲಾವಿದರಿಗೆ ವಿಭಿನ್ನವಾಗಿರುವ ಹಾಗೂ ಟ್ರೆಂಡ್ ಗೆ ತಕ್ಕಂತ ಕಾಸ್ಟ್ಯೂಮ್ಸ್ ಗಳನ್ನ ಡಿಸೈನ್ ಮಾಡಿಕೊಡುವ ವಸ್ತ್ರ ವಿನ್ಯಾಸಕಿ. ಫ್ಲಸ್ ಸಿನಿಮಾದಲ್ಲಿ ಅನಂತ್ ನಾಗ್ ಅವರ ಲುಕ್ ಅನ್ನು ಕಂಪ್ಲಿಟ್ ಆಗಿ ಬದಲಾಯಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದರು. ಇವರುಗಳನ್ನ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೊಸ ಹೊಸ ಸ್ಟಾರ್ ಡಿಸೈನರ್ಸ್ ಗಳು ಚಿತ್ರರಂಗಕ್ಕೆ ಬರುತ್ತಲೇ ಇದ್ದಾರೆ. ಕೆಂಡ ಸಂಪಿಗೆಯ ನಾಯಕಿ ಮಾನ್ವಿತಾ ಹರೀಶ್ ತೆರೆ ಮೇಲೆ ಸುಂದರವಾಗಿ ಕಾಣುವಂತೆ ಮಾಡುವುದು ವಸ್ತ್ರ ವಿನ್ಯಾಸಕಿ ತೇಜಸ್ವಿನಿ ಕ್ರಾಂತಿ. ಈಗಿನ ಯಂಗ್ ಸ್ಟರ್ ಗಳಿಗೆ ಮೆಚ್ಚುಗೆ ಆಗುವಂತಹ ಬಟ್ಟೆಗಳನ್ನ ಡಿಸೈನ್ ಮಾಡುತ್ತಾರೆ ತೇಜು.
Comments