ಅಮೇರಿಕಾದಲ್ಲಿ ಗುಟುರು ಹಾಕಲಿರುವ ಶಿವಣ್ಣನ 'ಟಗರು'



ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್ ನಲ್ಲಿ ಮೂಡಿಬಂದ 'ಟಗರು' ಸಿನಿಮಾ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 'ಟಗರು' ಹವಾ ಕರ್ನಾಟಕದ ಮೂಲೆ ಮೂಲೆಯಲ್ಲೂ ಜೋರಾಗಿದೆ.
ಬಾಕ್ಸ್ ಆಫೀಸ್ ನಲ್ಲಿ 'ಟಗರು' ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಧನಂಜಯ್, ವಸಿಷ್ಟ ಸಿಂಹ, ಭಾವನಾ, ಮಾನ್ವಿತಾ ಹರೀಶ್ ಸೇರಿದಂತೆ ದೊಡ್ಡ ತಾರಾಬಳಗ ಇರುವ 'ಟಗರು' ಚಿತ್ರವನ್ನ 'ಶಿವ'ಭಕ್ತರು ಪದೇ ಪದೇ ಕಣ್ತುಂಬಿಕೊಳ್ತಿದ್ದಾರೆ. ಇಂತಿಪ್ಪ 'ಟಗರು' ಇದೀಗ ಅಮೇರಿಕಾದಲ್ಲಿ ಗುಟುರು ಹಾಕಲು ಸಜ್ಜಾಗಿದೆ. ಮಾರ್ಚ್ 8 ಅಂದ್ರೆ ಇಂದು 'ಯು.ಎಸ್.ಎ'ನಲ್ಲಿ 'ಟಗರು' ತೆರೆಗೆ ಅಪ್ಪಳಿಸಲಿದೆ. ಶಿಕಾಗೋ, ಫಿಲಡೆಲ್ಫಿಯ, ಅಟ್ಲಾಂಟ ಸೇರಿದಂತೆ 25ಕ್ಕೂ ಹೆಚ್ಚು ಕಡೆ 'ಟಗರು' ಬಿಡುಗಡೆ ಆಗಲಿದೆ. ದುನಿಯಾ ಸೂರಿ ನಿರ್ದೇಶನದ 'ಟಗರು' ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕ್ರೌರ್ಯ ತುಸು ಹೆಚ್ಚಾಗಿರುವ 'ಟಗರು' ಸಿನಿಮಾ ಮಾಸ್ ಆಡಿಯನ್ಸ್ ಗೆ ಹೇಳಿ ಮಾಡಿಸಿದ ಚಿತ್ರ. ರೌಡಿಸಂ ಸುತ್ತ ಹೆಣೆದಿರುವ 'ಟಗರು' ಚಿತ್ರದಲ್ಲಿ ಶಿವರಾಜ್ ಕುಮಾರ್ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ರೌಡಿ 'ಡಾಲಿ' ಆಗಿ ಧನಂಜಯ್ ಶಿವಣ್ಣನ ಎದುರು ತೊಡೆ ತಟ್ಟಿ ನಿಲ್ಲುತ್ತಾರೆ. ಇವರಿಬ್ಬರ ಜುಗಲ್ಬಂದಿಯೇ 'ಟಗರು' ಸಿನಿಮಾ. ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಟಗರು' ವಿದೇಶಗಳಲ್ಲಿ ಹೇಗೆ ಅಬ್ಬರಿಸುತ್ತೋ, ನೋಡ್ಬೇಕು.
Comments