ಉಡುಪಿಯ ಶಾಸ್ತ್ರಾ ಶೆಟ್ಟಿಗೆ ಮಿಸ್ ಕ್ವೀನ್ ಕರ್ನಾಟಕ ಅವಾರ್ಡ್ ಒಲಿದಿದೆ

ಉಡುಪಿ: ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿಯ ಶಾಸ್ತ್ರಾ ಶೆಟ್ಟಿಗೆ ಕ್ವೀನ್ ಕರ್ನಾಟಕ ಅವಾರ್ಡ್ ಒಲಿದು ಬಂದಿದೆ. ಪತ್ರಿಕೋದ್ಯಮ ವಿದ್ಯಾರ್ಥಿನಿ ಶಾಸ್ತ್ರಾ ಭಾರತೀಯ ವಿದೇಶಾಂಗ ಸೇವೆ(ಐಎಫ್‌ಎಸ್) ಮಾಡಿ ರಾಯಭಾರಿ ಯಾಗಬೇಕೆನ್ನುವ ಕನಸು ಕಂಡವರು ಇಂದು ಸೌಂದರ್ಯ ಸ್ಪರ್ಧೆಯಲ್ಲಿ ಮಿಂಚಿದ್ದಾರೆ.
ಜ.27ರಂದುಕೇರಳದ ಕೊಚ್ಚಿನ್ನಲ್ಲಿ ನಡೆದ ಮಿಸ್ ಸೌತ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಮಣಿಪಾಲದ ಎಂಐಸಿ ಅಂತಿಮ ವರ್ಷದ ವಿದ್ಯಾರ್ಥಿನಿ ಶಾಸ್ತ್ರಾ ಎಸ್. ಶೆಟ್ಟಿ(20) ಈ ಪ್ರಶಸ್ತಿ ಗೆದ್ದಿದ್ದಾರೆ.5 ರಾಜ್ಯಗಳ ಸುಮಾರು 35 ಸ್ಪರ್ಧಿಗಳ ಪೈಕಿ ಶಾಸ್ತ್ರಾ ಅಂತಿಮ 5ರ ಘಟ್ಟ ತಲುಪಿದ್ದು ಕರ್ನಾಟಕದ 8 ಸ್ಪರ್ಧಿಗಳ ನಡುವೆ ಈಕೆ ಗೆಲುವಿನ ನಗೆ ಬೀರಿದ್ದರು. ಈ ಜಯದೊಡನೆ ಶಾಸ್ತ್ರಾ ಜೂನ್, ಜುಲೈಯಲ್ಲಿ ನಡೆಯುವ ರಾಷ್ಟ್ರಮಟ್ಟದ ಮಿಸ್ ಕ್ವೀನ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅಲ್ಲಿ ಗೆದ್ದವರನ್ನು ಮಿಸ್ ಕ್ವೀನ್ ಏಷ್ಯಾ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ.ಈ ಹಿಂದೆ ಮಿಸ್ ಮಂಗಳೂರು ಪ್ರಶಸ್ತಿ ಗೆದ್ದಿದ್ದ ಈಕೆ ಬಲ್ಗೇರಿಯಾದಲ್ಲಿ ನಡೆದ ಬ್ಯೂಟಿ ಕಾಂಟೆಸ್ಟ್ ನ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.
ಶಾಸ್ತ್ರಾ ತಂದೆ ಶಶಿ ಶೆಟ್ಟಿ ಮತ್ತು ತಾಯಿ ಶರ್ಮಿಳಾ ಶೆಟ್ಟಿ ಆಗಿದ್ದು ಗೋವಾದಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಗೋವಾದಲ್ಲಿ ಮುಗಿಸಿದ್ದ ಶಾಸ್ತ್ರಾ 8ರಿಂದ 12ನೇ ತರಗತಿ ಉಡುಪಿಯ ವಿದ್ಯೋದಯದಲ್ಲಿ ವ್ಯಾಸಂಗ ಮಾಡಿದ್ದರು. ಪ್ರಸ್ತುತ ಈಕೆ ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್(ಎಂಐಟಿ)ಯಲ್ಲಿ ಅಂತಿಮ ವರ್ಷದ ಮಾಧ್ಯಮ ಮತ್ತು ಸಂವಹನ ಪದವಿ ಓದುತ್ತಿದ್ದಾರೆ."ಈ ಸೌಂದರ್ಯ ಸ್ಪರ್ಧೆ ಒಂದು ಅದ್ಭುತ ಅವಕಾಶವಾಗಿದೆ. ಇದರ ಮೂಲಕ ನಾನು ಮತ್ತಷ್ಟು ಕಲಿತಿರುವೆನು. ಪೋಷಕರ ಪ್ರೋತ್ಸಾಹದ ಕಾರಣ ನಾನು ಈ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ.ಅವರು ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಿಲ್ಲ, ಯಾವುದೇ ಅಡ್ಡಿ ಮಾಡುವುದಿಲ್ಲ. ನನ್ನ ಪಾಲಿಗೆ ಸಿಕ್ಕ ಅವಕಾಶವನ್ನು ನಾನು ಬಳಸಿಕೊಳ್ಳುತ್ತಿದ್ದೇನೆ. " ಪ್ರಶಸ್ತಿ ವಿಜೇತ ಯುವತಿ ಶಾಸ್ತ್ರಾ ಶೆಟ್ಟಿ ಹೇಳಿದರು.
Comments