ದರ್ಶನ್ 51ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ..!!
ಇತ್ತೀಚೆಗೆ ಚಮಕ್ ಚಿತ್ರದ ಗೆಲುವಿನ ಸಂಭ್ರಮಾಚರಣೆ ವೇಳೆ ತಮ್ಮ ಮುಂದಿನ ಪ್ರಾಜೆಕ್ಟ್ ಕನ್ನಡದ ಒಬ್ಬ ಸ್ಟಾರ್ ನಟನ ಜೊತೆಗೆ ಎಂದು ನಟಿ ರಶ್ಮಿಕಾ ಹೇಳಿದ್ದರು. ಅದು ಅನೇಕ ಊಹಾಪೋಹಗಳಿಗೆ ಕಾರಣವಾಗಿತ್ತು. ಯಾರಿರಬಹುದು ಆ ಸ್ಟಾರ್ ನಟ ಎಂದು ಚಿತ್ರಪ್ರೇಮಿಗಳು ಕುತೂಹಲದಿಂದ ಪ್ರಶ್ನಿಸುತ್ತಿದ್ದರು.
ಸ್ಯಾಂಡಲ್ ವುಡ್ ನ ಪ್ರಮುಖ ನಟರ ಹೆಸರುಗಳು ಕೇಳಿಬರುತ್ತಿತ್ತು. ಇದೀಗ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ರಶ್ಮಿಕಾ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂಬುದು. ದರ್ಶನ್ ಅವರ 51ನೇ ಚಿತ್ರವನ್ನು ಪೊನ್ ಕುಮಾರ್ ನಿರ್ದೇಶಿಸಲಿದ್ದು, ಶೈಲಜಾ ನಾಗ್ ಮತ್ತು ಸುರೇಶ್ ಬಿ ನಿರ್ಮಾಣ ಮಾಡಲಿದ್ದಾರೆ.ಚಿತ್ರದಲ್ಲಿ ಇಬ್ಬರು ನಾಯಕಿಯರಿರಲಿದ್ದು, ಒಬ್ಬ ನಾಯಕಿ ಪಾತ್ರಕ್ಕೆ ರಶ್ಮಿಕಾ ಜೊತೆ ಚಿತ್ರ ನಿರ್ಮಾಪಕರ ತಂಡ ಮಾತುಕತೆ ನಡೆಸುತ್ತಿದೆ. ಕನ್ನಡದ ಮತ್ತೊಬ್ಬ ನಟಿ ರಚಿತಾ ರಾಮ್ ಜೊತೆಗೆ ಕೂಡ ಮಾತುಕತೆ ನಡೆಸಲಾಗುತ್ತಿದೆ ಎಂದು ಹಲವು ದಿನಗಳಿಂದ ಸುದ್ದಿ ಕೇಳಿಬರುತ್ತಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆಯಿಟ್ಟಿಲ್ಲ.
ಆದರೂ ನಿರ್ಮಾಪಕರು ಚಿತ್ರದ ನಾಯಕಿಯರ ಪಾತ್ರದ ಬಗ್ಗೆ ಇನ್ನೂ ಖಚಿತ ಮಾಹಿತಿ ನೀಡಿಲ್ಲ. ವಾಸ್ತವವಾಗಿ ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರ ಮನಸ್ಸಿನಲ್ಲಿ ಹತ್ತಾರು ನಾಯಕಿಯರ ಹೆಸರುಗಳಿವೆಯಂತೆ. ನಟ-ನಟಿಯರ ಜೊತೆ ಒಪ್ಪಂದ ಆದ ನಂತರವೇ ಔಪಚಾರಿಕವಾಗಿ ಚಿತ್ರತಂಡ ನಾಯಕಿಯರ ಹೆಸರುಗಳನ್ನು ಬಹಿರಂಗಪಡಿಸಲಿದೆ. ಪೊನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಚಿತಾ ರಾಮ್ ನಾಯಕಿಯರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
Comments