ಅಂಬಿ ಪುತ್ರ ಅಭಿಷೇಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವ ಪವನ್ ಒಡೆಯರ್
ಹಿರಿಯ ನಟ ಅಂಬರೀಷ್ ಅವರ ಪುತ್ರ ಅಭಿಷೇಕ್ ಗೌಡ ಅವರು ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುವ ಬಗ್ಗೆ ಇಷ್ಟು ದಿನ ಸುದ್ದಿಗಳು ಹರಿದಾಡುತ್ತಿದ್ದವು. ಅದೀಗ ನಿಜವಾಗುವ ಸಮಯ ಬಂದಿದೆ. ನಿರ್ದೇಶಕ ಪವನ್ ಒಡೆಯರ್ ಅಭಿಷೇಕ್ ಗೌಡರಿಗೆ ಆಕ್ಷನ್ ಕಟ್ ಹೇಳಲಿದ್ದು ಸಂದೇಶ್ ನಾಗರಾಜ್ ನಿರ್ಮಾಪಕರಾಗಿದ್ದಾರೆ.
ಪವನ್ ಒಡೆಯರ್ ಅವರ ಕಥೆಯನ್ನು ಈಗಾಗಲೇ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ. ಪ್ರಾಜೆಕ್ಟ್ ಆರಂಭ ಹಂತದಲ್ಲಿದೆ. ಇದೀಗ ಚಿತ್ರದ ಸ್ಕ್ರಿಪ್ಟ್ ಮತ್ತು ಸಂಭಾಷಣೆ ಬರೆಯುವ ಕೆಲಸದಲ್ಲಿ ಪವನ್ ಒಡೆಯರ್ ತೊಡಗಿದ್ದು ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಅಭಿಷೇಕ್ ಚಿತ್ರಕ್ಕೆ 6 ಮಂದಿ ಸಂಗೀತ ನಿರ್ದೇಶಕರು ಮತ್ತು 5 ಮಂದಿ ಗೀತ ರಚನೆಕಾರರು ಕೆಲಸ ಮಾಡಿ ವಿಶೇಷ ಸೊಗಸಾದ ಗೀತೆಗಳನ್ನು ರಚಿಸಲಿದ್ದಾರೆ. ಚಿತ್ರದಲ್ಲಿ ಅಭಿಷೇಕ್ ಪಾತ್ರದ ಬಗ್ಗೆ ರಹಸ್ಯ ಕಾಪಾಡಲು ನಿರ್ಮಾಣ ತಂಡ ನಿರ್ಧರಿಸಿದೆ.ಇದು ಅಭಿಷೇಕ್ ಗೌಡ ಅವರಿಗೆ ಮೊದಲ ಚಿತ್ರವಾಗಿರುವುದರಿಂದ ಚಿತ್ರ ತಯಾರಿಯಲ್ಲಿ ಪ್ರೇಕ್ಷಕರನ್ನು ಸೇರಿಸಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ಕೆಲವು ದೃಶ್ಯಗಳನ್ನು ಜನತೆಗೆ ತೋರಿಸಿ ಅವರಿಂದ ಸಂಭಾಷಣೆ ಬರೆಸಲಿದ್ದಾರೆ. ಜನರು ನೀಡುವ ಸಂಭಾಷಣೆಗಳಲ್ಲಿ ಉತ್ತಮವಾದದ್ದನ್ನು ನಾಯಕ ಅಭಿಷೇಕ್ ಬಾಯಲ್ಲಿ ಹೇಳಿಸಲು ನಿರ್ಮಾಣ ತಂಡ ನಿರ್ಧರಿಸಿದೆ. ಚಿತ್ರದಲ್ಲಿ ಕಲಾವಿದರ ಆಯ್ಕೆ ಅಂತಿಮ ಮಾಡಿದ ನಂತರ ಇತರ ತಂತ್ರಜ್ಞರ ಹೆಸರುಗಳನ್ನು ತಂಡ ಘೋಷಣೆ ಮಾಡಲಿದೆ. ಚಿತ್ರದ ನಾಯಕಿಗೆ ಕನ್ನಡತಿಯನ್ನೇ ಆಯ್ಕೆ ಮಾಡಲಿದೆಯಂತೆ. ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ ಮೊದಲಾದ ಹಿಟ್ ಚಿತ್ರಗಳನ್ನು ನೀಡಿದ ಅಭಿಷೇಕ್ ಗೌಡ ಅವರನ್ನು ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪರಿಚಯಿಸುತ್ತಿರುವ ಪವನ್ ಒಡೆಯರ್ ಗೆ ಇದು ಸವಾಲಿನ ಮತ್ತು ಕುತೂಹಲದ ಸಿನಿಮಾವಾಗಿದೆಯಂತೆ.
Comments