'ಟೈಗರ್ ಜಿಂದಾ ಹೇ' ಚಿತ್ರವನ್ನು ಪ್ರಧಾನಿ ಮೋದಿಗೆ ಅರ್ಪಿಸಿದ ಚಿತ್ರ ತಂಡ

ಕಳೆದ ವಾರ ಬಿಡುಗಡೆಗೊಂಡು ಈಗಾಗಲೇ ಇನ್ನೂರು ಕೋಟಿಗೂ ಮೇಲೆ ವಹಿವಾಟು ನಡೆಸಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್, ಪರೇಶ್ ರಾವಲ್, ಅಂಗದ್ ಬೇಡಿ ಮುಂತಾದವರಿದ್ದಾರೆ. ಚಿತ್ರವನ್ನು ಆಲಿ ಅಬ್ಬಾಸ್ ಜಫರ್ ನಿರ್ದೇಶಿಸಿದ್ದರು.
ನೈಜಕಥೆಯನ್ನಾಧರಿಸಿದ ಚಿತ್ರವಿದು ಎಂದು ಹೇಳಿರುವ ನಿರ್ದೇಶಕ ಜಫರ್, ಈ ಚಿತ್ರವನ್ನು ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಅರ್ಪಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಪ್ರಧಾನಿಯವರ ಕಾರ್ಯಕ್ಷಮತೆಯ ಬಗ್ಗೆ ಚಿತ್ರದಲ್ಲೇ ಉಲ್ಲೇಖಿಸಲು ನಾವು ನಿರ್ಧರಿಸಿದ್ದೆವು, ಆದರೆ ಅದಕ್ಕೆ ಸೆನ್ಸಾರ್ ಮಂಡಳಿ ಅನುಮತಿ ನೀಡಿರಲಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ. ಐಸಿಎಸ್ ಉಗ್ರರು ಭಾರತೀಯ ನರ್ಸುಗಳನ್ನು ಒತ್ತೆಯಾಗಿರಿಸಿಕೊಂಡಿದ್ದ ಕಥಾಹಂದರವನ್ನು ಚಿತ್ರ ಹೊಂದಿದೆ. 2014ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿಕೊಂಡ ನಂತರ ನಡೆದ ಘಟನೆಯೊಂದರಲ್ಲಿ, ಸುಮಾರು 46 ಭಾರತೀಯ ನರ್ಸುಗಳನ್ನು ಐಸಿಎಸ್ ಉಗ್ರರು ಇರಾಕ್ ನಲ್ಲಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು.
ತುಂಬಾ ಸೂಕ್ಷ್ಮವಾಗಿದ್ದ ಈ ವಿಚಾರವನ್ನು ಪ್ರಧಾನಿ ಮೋದಿ, ಸಚಿವೆ ಸುಷ್ಮಾ ಸ್ವರಾಜ್ ಮತ್ತು ನಮ್ಮ ವಿದೇಶಾಂಗ ಸಚಿವಾಲಯ, ಹತ್ತು ದಿನಗಳ ನಿರಂತರ ಪ್ರಯತ್ನದಿಂದ ಅಚ್ಚುಕಟ್ಟಾಗಿ ನಿಭಾಯಿಸಿತ್ತು. ಎಲ್ಲಾ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವಲ್ಲಿ ನಮ್ಮ ಸರಕಾರ ಯಶಸ್ವಿಯಾಗಿತ್ತು ಎಂದು ನಿರ್ದೇಶಕ ಜಫರ್ ಹೇಳಿದ್ದಾರೆ. ಈ ಘಟನೆಯನ್ನೇ ಸ್ಪೂರ್ತಿಯಾಗಿಸಿಕೊಂಡು ಟೈಗರ್ ಜಿಂದಾ ಹೇ ಚಿತ್ರವನ್ನು ನಿರ್ದೇಶಿಸಿದ್ದೇನೆ ಮತ್ತು ಈ ಚಿತ್ರ ಪ್ರಧಾನಿ ಮೋದಿಗೆ ಅರ್ಪಣೆ ಎಂದು ನಿರ್ದೇಶಕರು ಹೇಳಿದ್ದಾರೆ.
Comments