ಬಿಗ್ ಬಾಸ್ ಮನೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಯುವಪಕ್ಷ

'ಬಿಗ್ ಬಾಸ್' ಮನೆಯಲ್ಲಿ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡಿದ್ದು, ವಿರೋಧ ಪಕ್ಷದಲ್ಲಿದ್ದವರು ಅಧಿಕಾರಕ್ಕೆ ಬಂದಿದ್ದಾರೆ. ಬಹುಮತ ಪಡೆದುಕೊಂಡಿದ್ದ ಶಾಂತಿ ಕ್ರಾಂತಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಸರಿಯಾದ ಸಮಯಕ್ಕೆ ತಿಂಡಿ ಕೊಟ್ಟಿಲ್ಲ. ಸ್ವಚ್ಛತೆ ಕಾರ್ಯ ಪಾಲಿಸಿಲ್ಲ.
ವಿವಿಧ ಚಟುವಟಿಕೆಗಳನ್ನು ಮಾಡುವುದಾಗಿ ಭರವಸೆ ನೀಡಿದ್ದರೂ, ಅದನ್ನು ಈಡೇರಿಸದ ಕಾರಣ, ವಿರೋಧ ಪಕ್ಷದ(ಯುವ ಶಕ್ತಿ ಪಕ್ಷ) ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಪಕ್ಷದ ಮುಖಂಡರಾಗಿ ದಿವಾಕರ್ ಅವರನ್ನು ಇಳಿಸಿ, ನಿವೇದಿತಾ ಅವರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಸೀಕ್ರೆಟ್ ರೂಂನಲ್ಲಿರುವ ಜಯಶ್ರೀನಿವಾಸನ್ ಮತ್ತು ಸಮೀರಾಚಾರ್ಯ ಅವರ ಬೆಂಬಲವೂ ಇದೆ. ಆಡಳಿತ ಪಕ್ಷದವರು ಹಣವನ್ನು ಸರಿಯಾಗಿ ಇಟ್ಟುಕೊಂಡಿಲ್ಲ. ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಪಕ್ಷದ ಸದಸ್ಯರು ಟೀಕಿಸಿದ್ದಾರೆ. ಇದಕ್ಕೆ ಆಡಳಿತ ಪಕ್ಷದವರು ಸಮಜಾಯಿಷಿ ನೀಡಿದ್ದಾರೆ.
ಇನ್ನು ಸೀಕ್ರೆಟ್ ರೂಂನಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳುವ ವಿಚಾರಕ್ಕೆ ಜಯಶ್ರೀನಿವಾಸನ್ ಮತ್ತು ಸಮೀರಾಚಾರ್ಯ ಅವರ ನಡುವೆ ಜಗಳವಾಗಿದೆ. ಪ್ರತಿಪಕ್ಷದ ಸದಸ್ಯರಾದ ದಿವಾಕರ್, ಚಂದನ್, ರಿಯಾಜ್ ಹಾಗೂ ನಿವೇದಿತಾ ಪ್ರತಿಭಟನೆ ನಡೆಸಿದ್ದು, ಅವರು ನೀಡಿದ ದೂರುಗಳ ಸತ್ಯಾಸತ್ಯತೆ ಪರಿಶೀಲಿಸಿ ಸೀಕ್ರೆಟ್ ರೂಂನಲ್ಲಿದ್ದ ಜಯಶ್ರೀನಿವಾಸನ್ ಮತ್ತು ಸಮೀರಾಚಾರ್ಯ ತೀರ್ಮಾನ ನೀಡಿದ್ದಾರೆ. ಊಟ ಲೇಟಾದ ಕಾರಣಕ್ಕೆ ಪ್ರತಿ ಸದಸ್ಯರಿಗೆ 500 ರೂ. ಕೊಡಲು ಆಡಳಿತ ಪಕ್ಷಕ್ಕೆ ಸೂಚಿಸಲಾಗಿದೆ. ಸೀಕ್ರೆಟ್ ರೂಂನಲ್ಲಿ ಇವರು ಕೈಗೊಂಡ ತೀರ್ಮಾನ ಮನೆಯೊಳಗಿನ ಸದಸ್ಯರಿಗೆ ತಿಳಿದಿಲ್ಲ. ಆಡಳಿತ ಪಕ್ಷದ ಮೇಲೆ 5 ಗಂಭೀರ ಆರೋಪಗಳನ್ನು ಮಾಡಿದ ಪ್ರತಿಪಕ್ಷದ ಸದಸ್ಯರು ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ ತಾವು ಅಧಿಕಾರಕ್ಕೆ ಬಂದಿದ್ದಾರೆ. ಅಧಿಕಾರಕ್ಕೆ ಬರುತ್ತಲೇ ವಿವಿಧ ಯೋಜನೆಗಳನ್ನು ಪ್ರಕಟಿಸಿದ್ದು, ಅದರ ಕುರಿತಾಗಿ ಅಧಿಕಾರ ಕಳೆದುಕೊಂಡ ಸದಸ್ಯರ ನಡುವೆ ಭಾರೀ ಚರ್ಚೆಯೇ ನಡೆದಿದೆ. ಇನ್ನು ಈ ವಾರ ದಿವಾಕರ್, ಜಯಶ್ರೀನಿವಾಸನ್, ಕೃಷಿ, ನಿವೇದಿತಾ, ಸಮೀರಾಚಾರ್ಯ ನಾಮಿನೇಟ್ ಆಗಿದ್ದು, ಯಾರು ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Comments