'ಅಂಜನಿಪುತ್ರ' ಚಿತ್ರಕ್ಕೆ ಬಿಗ್ ರಿಲೀಫ್
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ 'ಅಂಜನಿಪುತ್ರ' ವಿವಾದ ಸುಖಾಂತ್ಯ ಕಂಡಿದ್ದು, ಚಿತ್ರ ಪ್ರದರ್ಶನಕ್ಕೆ ಸೆಷೆನ್ಸ್ ಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಶುಕ್ರವಾರ ತೆರವುಗೊಳಿಸಲಾಗಿದೆ. ಅಂಜನಿಪುತ್ರ ಚಿತ್ರ ನಿರ್ಮಾಪಕರು ಮತ್ತು ವಕೀಲರ ನಡುವೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಚಿತ್ರದಿಂದ ವಿವಾದಿತ ಸಂಭಾಷಣೆಯನ್ನು ತೆಗೆದು ಹಾಕಲು ಒಪ್ಪಿಗೆ ಸೂಚಿಸಲಾಗಿದೆ.
ಅಲ್ಲದೆ ನಿರ್ದೇಶಕ ಹರ್ಷ ಬಹಿರಂಗ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಅರ್ಜಿ ಹಿಂಪಡೆಯುವದಾಗಿ ನ್ಯಾಯಾಲಯಕ್ಕೆ ಅರ್ಜಿದಾರರ ಪರ ವಕೀಲ ನಾರಾಯಣಸ್ವಾಮಿ ಮೆಮೊ ಸಲ್ಲಿಸಿದರು. ಕೋರ್ಟ್ ತಡೆಯಾಜ್ಞೆ ಇದ್ದರೂ ಚಿತ್ರ ಪ್ರದರ್ಶಿಸಿದ ನಿರ್ಮಾಪಕರಿಗೆ ದಂಡ ವಿಧಿಸುವಂತೆ ಅರ್ಜಿದಾರರ ಪರ ವಕೀಲರು ಮೆಮೋದಲ್ಲಿ ಕೋರಿದ್ದರು. ವಕೀಲರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ನಿರ್ಮಾಪಕರಿಗೆ 25 ಸಾವಿರ ರು. ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ವಕೀಲರ ಕಲ್ಯಾಣ ನಿಧಿಗೆ ಪಾವತಿಸುವಂತೆ ಆದೇಶಿಸಿದೆ. ಚಿತ್ರದಲ್ಲಿ ವಕೀಲರ ವಿರುದ್ಧ ಅವಹೇಳನಕಾರಿ ಸಂಭಾಷಣೆ ಬಳಕೆ ಮಾಡಲಾಗಿದ್ದು, ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಕೋರಿ ವಕೀಲ ನಾರಾಯಣಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಜನವರಿ 2ರ ವರೆಗೆ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿತ್ತು.
Comments