ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ಕಿರಿಕ್ ಹುಡುಗಿ ಸಂಯುಕ್ತ

'ಬಿಗ್ ಬಾಸ್' ಮನೆಯಲ್ಲಿ ಸಮೀರಾಚಾರ್ಯ ಮೇಲೆ ಸಂಯಕ್ತಾ ಹೆಗ್ಡೆ ಹಲ್ಲೆ ಮಾಡಿದ್ದಾರೆ. 'ಬಿಗ್ ಬಾಸ್' ನಿಯಮದ ಪ್ರಕಾರ, ಮನೆಯೊಳಗೆ ಯಾವುದೇ ಕಾರಣಕ್ಕೂ ಕೈ ಮಾಡುವಂತಿಲ್ಲ. ಯಾರೇ ಮಾಡಿದ್ರೂ ಅವರನ್ನು ಹೊರ ಕಳಿಸಲಾಗುತ್ತದೆ ಎಂದು ಈ ಮೊದಲೇ ಹೇಳಲಾಗಿದೆ. ಅದರಂತೆ ಸಂಯುಕ್ತಾ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ.
ಹಿಂದಿನ ಸೀಸನ್ ನಲ್ಲಿ ಹುಚ್ಚ ವೆಂಕಟ್ ಅವರು, ಸಿಂಗರ್ ರವಿ ಅವರ ಮೇಲೆ ಹಲ್ಲೆ ನಡೆಸಿದಾಗ ಅವರನ್ನು ಮನೆಯಿಂದ ಹೊರ ಹಾಕಲಾಗಿತ್ತು. ಅದೇ ರೀತಿ ಕಳೆದ ಸೀಸನ್ ನಲ್ಲಿ ಅತಿಥಿಯಾಗಿ ಮನೆಯೊಳಗೆ ಪ್ರವೇಶಿಸಿದ್ದ ಹುಚ್ಚ ವೆಂಕಟ್, ಪ್ರಥಮ್ ಅವರ ಮೇಲೆ ಹಲ್ಲೆ ಮಾಡಿದ್ದರು. ಕೂಡಲೇ ಅಲ್ಲಿಂದ ವೆಂಕಟ್ ಅವರನ್ನು ಹೊರಗೆ ಕರೆತರಲಾಗಿತ್ತು. ಈ ಸೀಸನ್ ನಲ್ಲಿಯೂ ನಡೆಯಬಾರದ ಘಟನೆ ನಡೆದಿದೆ. ಮನೆಯೊಳಗೆ ಅತಿಥಿಯಾಗಿ ಪ್ರವೇಶ ಪಡೆದಿದ್ದ ಸಂಯುಕ್ತಾ ಹೆಗ್ಡೆ, ಸಮೀರಾಚಾರ್ಯ ಅವರು ಅನುಚಿತವಾಗಿ ವರ್ತಿಸಿದ್ದಾಗಿ ಆಕ್ರೋಶಗೊಂಡು ಹಲ್ಲೆ ಮಾಡಿದ್ದಾರೆ. ಸಮೀರಾಚಾರ್ಯ ಅವರು ತಿರುಗಿಸಿ ಹೊಡೆಯುವ ಹಂತಕ್ಕೆ ಬಂದರೂ ಅವರು ತಾಳ್ಮೆ ಕಳೆದುಕೊಳ್ಳದೇ, ನಾನು ತಪ್ಪು ಮಾಡಿದ್ದರೆ, ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧವಿದ್ದೇನೆ. ನನ್ನಿಂದ ತಪ್ಪಾಗಿದ್ದರೆ, ಮನೆಯಿಂದ ಹೊರ ಹಾಕಿ ಎಂದು ಕಾನ್ಫಿಡೆಂಟ್ ಆಗಿ ಹೇಳಿದಾಗಲೇ ಅವರು ತಪ್ಪು ಮಾಡಿಲ್ಲ ಎನ್ನುವುದು ಗೊತ್ತಾಗಿತ್ತು. ಅಷ್ಟಕ್ಕೂ ಸಂಯುಕ್ತಾ ಮನೆಯೊಳಗೆ ಬಂದಾಗಿನಿಂದಲೂ ಎಲ್ಲರೊಂದಿಗೆ ಕಿರಿಕ್ ಮಾಡಿಕೊಂಡಿದ್ದರು.
ಸವಾಲ್ ನಲ್ಲಿ ಭಾಗವಹಿಸುವಾಗ ಸದಸ್ಯರಿಗೆ ಗೆಲ್ಲಲು ಜಾಣ್ಮೆ, ತಾಳ್ಮೆ, ಕಾರ್ಯತಂತ್ರ ಮುಖ್ಯವಾಗಿರುತ್ತದೆ. ಸಂಯುಕ್ತಾ, ಆಕ್ರೋಶದಿಂದ ಸಮೀರಾಚಾರ್ಯ ಅವರ ಮೇಲೆ ಹಲ್ಲೆ ಮಾಡಿದರೂ, ಮನೆಯಿಂದ ಹೊರ ಬರುವಾಗ, ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದಾರೆ. ನಾನೇ ಸಿಟ್ಟಾಗಿಬಿಟ್ಟೆ. ನನ್ನ ವರ್ತನೆ ಸರಿಯಾಗಿರಲಿಲ್ಲ. ಕೈ ಮಾಡಿದ್ದಕ್ಕೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ. ಸಂಯುಕ್ತಾ ಹಲ್ಲೆ ಮಾಡಿದ ಸಂದರ್ಭದಲ್ಲಿ ಬೇರೆ ಸದಸ್ಯರು ಶಾಕ್ ಆಗಿದ್ದಾರೆ. ನಡೆಯಬಾರದ ಘಟನೆ ಮತ್ತೆ ನಡೆದಂತಾಗಿದೆ.
Comments