ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಬಿಗ್ ಬಾಸ್ ಮನೆ
'ಬಿಗ್ ಬಾಸ್' ಮನೆ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಮನೆಯೊಳಗಿನ ಸದಸ್ಯರೆಲ್ಲಾ ಕಣ್ಣೀರಿಟ್ಟಿದ್ದಾರೆ. ಮನೆಯಿಂದ ಸದಸ್ಯರಿಗೆ ಪತ್ರಗಳನ್ನು ಬರೆಯಲಾಗಿದ್ದು, ಇದರಲ್ಲಿ ಕೆಲವು ಸದಸ್ಯರ ಪತ್ರಗಳನ್ನು ಆಯ್ದು ಬೆಂಕಿಗೆ ಹಾಕಲು ತಿಳಿಸಲಾಗಿದೆ. ಉಳಿದ ಸದಸ್ಯರು ತಮ್ಮ ಪತ್ರಗಳನ್ನು ಓದಿದ್ದಾರೆ. ಈ ಎರಡೂ ಕ್ಷಣಗಳು ಭಾವುಕ ಸನ್ನಿವೇಶಕ್ಕೆ ಕಾರಣವಾಗಿವೆ.
ಮನೆಯಿಂದ ಸದಸ್ಯರಿಗೆ ಪತ್ರಗಳನ್ನು ಬರೆಯಲಾಗಿದ್ದು, ಅದರಲ್ಲಿ ಒಂದು ಪತ್ರವನ್ನು ಆಯ್ದು ಅದನ್ನು ಬೆಂಕಿಯಲ್ಲಿ ಹಾಕಲು ಸದಸ್ಯರಿಗೆ ತಿಳಿಸಲಾಗಿದೆ. ಕಾರ್ತಿಕ್ -ಜಗನ್ ಅವರು ನಿವೇದಿತಾಗೆ ಬಂದಿದ್ದ ಪತ್ರವನ್ನು ಬೆಂಕಿಗೆ ಹಾಕಿದ್ದು, ಇದರಿಂದಾಗಿ ಭಾವುಕರಾದ ನಿವೇದಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರಿಗೆ ಹಲವಾರು ಸದಸ್ಯರು ಸಮಾಧಾನಪಡಿಸಿದ್ದಾರೆ. ಸಮೀರಾಚಾರ್ಯ ಅವರಂತೂ ಪತ್ರ ತರಲು ಹೋಗುವ ಮೊದಲೇ ಕಣ್ಣೀರಿಟ್ಟಿದ್ದಾರೆ. ಅಳುತ್ತಲೇ ದಿವಾಕರ್ ಅವರೊಂದಿಗೆ ಹೋಗಿ ಕಾರ್ತಿಕ್ ಪತ್ರವನ್ನು ತಂದ ಸಮೀರಾಚಾರ್ಯ ಅಳುತ್ತಲೇ ಅದನ್ನು ಬೆಂಕಿಗೆ ಹಾಕಿ ಕಾರ್ತಿಕ್ ಬಳಿ ಸಾರಿ ಕೇಳಿದ್ದಾರೆ.
ಇನ್ನು ರಿಯಾಜ್ -ಜಯಶ್ರೀನಿವಾಸನ್ ಜೋಡಿ ಕೃಷಿಗೆ ಬಂದಿದ್ದ ಪತ್ರವನ್ನು ಬೆಂಕಿಗೆ ಹಾಕಿದ್ದಾರೆ. ರಿಯಾಜ್ ಪತ್ರ ತೆಗೆದುಕೊಳ್ಳಲು ಕನ್ ಫೆಷನ್ ರೂಂಗೆ ಹೋಗಿದ್ದ ಸಂದರ್ಭದಲ್ಲಿ ಭಾವುಕರಾಗಿದ್ದಾರೆ. ಚಂದು -ನಿವೇದಿತಾ ಅವರು ಶ್ರುತಿಗೆ ಬಂದಿದ್ದ ಪತ್ರವನ್ನು ಆಯ್ದುಕೊಂಡರೆ, ಅನುಪಮಾ -ಶ್ರುತಿ ಅವರು ಸಮೀರಾಚಾರ್ಯರಿಗೆ ಬಂದಿದ್ದ ಪತ್ರ ಆಯ್ದುಕೊಂಡಿದ್ದಾರೆ. ಸಂಯುಕ್ತಾ -ಲಾಸ್ಯ ಅವರು ಜಗನ್ ಗೆ ಬಂದ ಪತ್ರವನ್ನು ಬೆಂಕಿಗೆ ಹಾಕಿ ಸಾರಿ ಕೇಳಿದ್ದು, ನೀವು ಹೋಗುವಾಗಲೇ ನನ್ನ ಪತ್ರವನ್ನು ತರುತ್ತೀರಿ ಎಂದು ಗೊತ್ತಿತ್ತು ಎಂದು ಜಗನ್ ಹೇಳಿದ್ದಾರೆ. ಇದಕ್ಕೆ ಸಂಯುಕ್ತಾ, ಲಾಸ್ಯ ಸಿಡಿಮಿಡಿಗೊಂಡಿದ್ದಾರೆ. ಇನ್ನು ಅನುಪಮಾ, ದಿವಾಕರ್, ಜಯಶ್ರೀನಿವಾಸನ್, ರಿಯಾಜ್, ಚಂದನ್ ಅವರು ತಮಗೆ ಬಂದಿದ್ದ ಪತ್ರಗಳನ್ನು ಎಲ್ಲರೆದುರಲ್ಲಿ ಅಳುತ್ತಲೇ ಓದಿದ್ದಾರೆ. ಪತ್ರ ಕಳೆದುಕೊಂಡವರು ದುಃಖಿಸಿದ್ದಾರೆ. ಈ ಸನ್ನಿವೇಶದಲ್ಲಿ ಇಡೀ ಮನೆ ಭಾವುಕತೆಯಿಂದ ತುಂಬಿದೆ.
Comments