ರೈತರಿಗೆ ಸಹಾಯ ಮಾಡಲು ಕಾರನ್ನೇ ಮಾರಲು ಮುಂದಾದ ನಟ ಸುದೀಪ್

ರೈತರಿಗೆ ಸಹಾಯ ಮಾಡಲು ಮುಂದಾಗಿರುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ತಮ್ಮ ಬಳಿ ಇರುವ ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು ಎಕ್ಸ್ 6 ಸರಣಿಯ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಕಾರು ಮಾರಾಟದಿಂದ ಬರುವ ಹಣವನ್ನು ರೈತರಿಗಾಗಿ ದುಡಿಯುವ 'ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್' ಎಂಬ ಬೆಂಗಳೂರು ಮೂಲದ ಸರ್ಕಾರೇತರ ಸಂಘಟನೆಗೆ ನೀಡಲು ಕಿಚ್ಚ ಸುದೀಪ್ ನಿರ್ಧರಿಸಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಟ್ರಸ್ಟ್ ನ ಚಿಹ್ನೆ ಬಿಡುಗಡೆ ಮಾಡಿ ಮಾತನಾಡಿದ ನಟ ಸುದೀಪ್, ಹಲವು ವರ್ಷಗಳಿಂದ ತಾವು ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿದ್ದೇನೆ. ಬಹಳ ದುಡ್ಡು ಸಂಪಾದನೆ ಮಾಡದಿದ್ದರೂ ಕೂಡ ನನ್ನಲ್ಲಿ 4 ಐಷಾರಾಮಿ ಕಾರುಗಳಿವೆ. ಅವುಗಳಲ್ಲಿ ಒಂದನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಟ್ರಸ್ಟ್ ಗೆ ನೀಡುತ್ತೇನೆ ಎಂದು ಹೇಳಿದರು.ರೈತರಿಗಾಗಿ ಇರುವ ಟ್ರಸ್ಟ್ ನ ಚಿಹ್ನೆಯನ್ನು ಬಿಡುಗಡೆ ಮಾಡಿದ ಮಾತ್ರಕ್ಕೆ ಅಥವಾ ರೈತರನ್ನು ಸನ್ಮಾನಿಸಿದ ತಕ್ಷಣ ರೈತರ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಇದು ರೈತರ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಅಥವಾ ರೈತರ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತವೆ ಎಂದು ನನಗೆ ವಿವರಿಸಿ ಎಂದು ಸುದೀಪ್ ಕೇಳಿದರು.
ನಾನಿಲ್ಲಿ ಚಿಹ್ನೆಯನ್ನು ಬಿಡುಗಡೆ ಮಾಡಿದೆ. ಆದರೆ ಇದು ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ದೊಡ್ಡ ವೇದಿಕೆ ಮೇಲೆ ನಿಂತುಕೊಂಡು ಈ ರೀತಿ ನಾಲ್ಕು ಮಂದಿ ರೈತರನ್ನು ಸನ್ಮಾನಿಸಿದ ತಕ್ಷಣ ಅವರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಕೇವಲ ರೈತನಿಗೆ ಮಾತ್ರ ಮತ್ತೊಬ್ಬ ರೈತನ ಸಮಸ್ಯೆಗಳು ತಿಳಿಯಲು ಸಾಧ್ಯ ಎಂದು ಹೇಳಿದರು.ನಾವು ಮಳೆ ಭರಿಸಲು ಸಾಧ್ಯವಿಲ್ಲ. ಆದರೆ ನನಗೆ ರೈತರ ಬೆಲೆ ಗೊತ್ತು ಹೀಗಾಗಿ ನಾನು ನನ್ನಿಂದಾದ ಪುಟ್ಟ ಕಾಣಿಕೆ ನೀಡುತ್ತೇನೆ ಎಂದರು.ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಸಾಲ ತೆಗೆದುಕೊಳ್ಳುವ ರೈತರು ಅನವಶ್ಯಕವಾಗಿ ಹಣ ಖರ್ಚು ಮಾಡಬಾರದೆಂದು ಸಲಹೆ ನೀಡಿದರು. ಸಾಲಗಳನ್ನು ತೆಗೆದುಕೊಂಡಾಗ ಅದನ್ನು ಕೃಷಿಗಾಗಿಯೇ ಬಳಸಿಕೊಳ್ಳಿ ಅದು ಬಿಟ್ಟು ಮದುವೆಯೊ ಬೇರೆ ಯಾವುದೋ ಕೆಲಸಕ್ಕೆ ಬಳಸಬೇಡಿ. ಶ್ರೀಮಂತರು ಆಡಂಭರವಾಗಿ ಮದುವೆ ಕಾರ್ಯಕ್ರಮ ನಡೆಸುತ್ತಾರೆ. ಆದರೆ ಅಂತವರನ್ನು ಅನುಸರಿಸಬೇಡಿ ಎಂದರು.ಸಮಾಜ ಇಂದು ರೈತರನ್ನು ಮರೆಯುತ್ತಿದೆ. ರೈತರಿಗೆ ಅವರ ಮೌಲ್ಯಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಸಮಾಜದಲ್ಲಿ ಅವರಿಗೆ ವಿಶೇಷ ಸ್ಥಾನಮಾನ ಸಿಗಬೇಕಾಗಿದೆ ಎಂದು ಸುದೀಪ್ ಅಭಿಪ್ರಾಯಪಟ್ಟರು.
Comments