ಮಗನ ಚಿತ್ರಕ್ಕೆ ಕ್ಲಾಪ್ ಮಾಡಿದ ಎಚ್ ಡಿಕೆ
ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಿಖಿಲ್ ನಟಿಸುತ್ತಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಈಗ ಈ ಚಿತ್ರದ ಮುಹೂರ್ತ ಬುಧವಾರ ಬೆಳಿಗ್ಗೆ ಬಸವನಗುಡಿಯಲ್ಲಿರುವ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಮೊದಲ ದೃಶ್ಯಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ನಿಖಿಲ್ ಅವರ ತಂದೆ ಎಚ್.ಡಿ. ಕುಮಾರಸ್ವಾಮಿ ಕ್ಲಾಪ್ ಮಾಡಿದ್ದಾರೆ.
ಸೀತಾರಾಮ ಕಲ್ಯಾಣ ಚಿತ್ರವನ್ನು ಚೆನ್ನಾಂಬಿಕಾ ಫಿಲಂಸ್‍ನಡಿ ಅನಿತಾ ಕುಮಾರಸ್ವಾಮಿ ನಿರ್ಮಿಸಿದರೆ, ಹರ್ಷ ನಿರ್ದೇಶಿಸಲಿದ್ದಾರೆ. ಈ ಹಿಂದೆ ಚೆನ್ನಾಂಬಿಕಾ ಫಿಲಂಸ್‌ನಡಿ `ಸೂರ್ಯವಂಶ' ಮತ್ತು `ಚಂದ್ರ ಚಕೋರಿ' ತರಹದ ಕೌಟುಂಬಿಕ ಮತ್ತು ಗ್ರಾಮೀಣ ಸೊಗಡಿನ ಚಿತ್ರಗಳು ಬಿಡುಗಡೆಯಾಗಿದ್ದು, ಈಗ`ಸೀತಾರಾಮ ಕಲ್ಯಾಣ' ಸಹ ಅದೇ ಮಾದರಿಯ ಚಿತ್ರವಾಗಲಿದೆ.ಇಲ್ಲಿ ಸೆಂಟಿಮೆಂಟ್ ಜೊತೆಗೆ ಆ್ಯಕ್ಷನ್ ಬಗ್ಗೆಯೂ ಹೆಚ್ಚು ಗಮನಕೊಡಲಾಗಿದೆಯಂತೆ.
ಈ ಚಿತ್ರಕ್ಕೆ ಸ್ವಾಮಿ ಅವರ ಛಾಯಾಗ್ರಹಣ, ರವಿ ಬಸ್ರೂರು ಅವರ ಸಂಗೀತ ನಿರ್ದೇಶನ, ರಾಮ್-ಲಕ್ಷ್ಮಣ್ ಅವರ ಸಾಹಸ ಸಂಯೋಜನೆ ಇದ್ದು, ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಇನ್ನು ಚಿತ್ರದಲ್ಲಿ ಏಳೆಂಟು ಸೆಟ್‍ಗಳನ್ನು ಹಾಕಿ, ಅಲ್ಲೇ ಚಿತ್ರೀಕರಣ ಮಾಡಲಾಗುತ್ತದಂತೆ. ಸದ್ಯಕ್ಕೆ ನಿಖಿಲ್ ಮತ್ತು ಶರತ್ ಕುಮಾರ್ ಮಾತ್ರ ಆಯ್ಕೆಯಾಗಿದ್ದು, ಮಿಕ್ಕಂತೆ ಕಲಾವಿದರ ಆಯ್ಕೆ ನಡೆಯುತ್ತಿದೆ. ಮುಹೂರ್ತ ಆಗಿದ್ದರು, ಡಿಸೆಂಬರ್ 10ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಅಷ್ಟರಲ್ಲಿ ಉಳಿದ ಕಲಾವಿದರ ಆಯ್ಕೆ ಆಗಿರುತ್ತದೆ.
Comments