'ಹೋಮ್ ಮಿನಿಸ್ಟರ್' ವಿಭಿನ್ನ ಪಾತ್ರದಲ್ಲಿ ಮಿಂಚಲಿರುವ ಉಪೇಂದ್ರ!
ಪ್ರತೀ ಚಿತ್ರದಲ್ಲೂ ವಿಭಿನ್ನತೆ ತೋರ ಬಯಸುವ ನಟ ಉಪೇಂದ್ರ ಇದೀಗ ತಮ್ಮ ಮುಂದಿನ ಚಿತ್ರದಲ್ಲಿ ಅಭಿಮಾನಿಗಳನ್ನು ಮಹಿಳಾ ಪಾತ್ರದಲ್ಲಿ ರಂಜಿಸಲಿದ್ದಾರೆ. ಹೌದು.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಕಪ್ಪು ಬಣ್ಣ ಚೂಡಿದಾರ್ ತೊಟ್ಟಿರುವ ನಟ ಉಪೇಂದ್ರ ಮುಖಕ್ಕೆ ಕಪ್ಪು ಬಣ್ಣದ ಮುಸುಕು ಧರಿಸಿದ್ದಾರೆ.
ಇದು 'ಹೋಮ್ ಮಿನಿಸ್ಟರ್' ಚಿತ್ರೀಕರಣ ಸ್ಥಳದಿಂದಲೇ ತೆಗೆದ ವಿಡಿಯೋ ಎನ್ನಲಾಗಿದೆ. ಹೋಮ್ ಮಿನಿಸ್ಟರ್ ಚಿತ್ರವನ್ನು ನಿರ್ದೇಶಕ ಸುಜಯ್ ಕೆ ಶ್ರೀಹರಿ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ ಎಂಬುದು ವಿಶೇಷ. ಇನ್ನು ಉಪೇಂದ್ರ ಅವರ ಈ ಮಹಿಳಾ ಪಾತ್ರದ ಕುರಿತು ಚಿತ್ರ ತಂಡ ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ. ಉಪೇಂದ್ರ ಅವರ ಈ ಪಾತ್ರ ಕುತೂಹಲಕಾರಿಯಾಗಿದ್ದು, ಪ್ರೇಕ್ಷಕರು ಥಿಯೇಟರ್ ನಲ್ಲಿಯೇ ಆ ಕುತೂಹಲವನ್ನು ತಣಿಸಿಕೊಳ್ಳಲಿ ಎಂಬುದು ಚಿತ್ರತಂಡದ ಭಾವನೆಯಾಗಿದೆ. ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ಶ್ರೀಕಾಂತ್ ಅವರು ಈ ಬಗ್ಗೆ ಮಾತನಾಡಿ, ಉಪೇಂದ್ರ ಅವರು ಮೊದಲ ಬಾರಿಗೆ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು 'ಹೋಮ್ ಮಿನಿಸ್ಟರ್' ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಚಿತ್ರದ ಇನ್ನೆರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಮುಂದಿನ ತಿಂಗಳಾಂತ್ಯದ ಹೊತ್ತಿಗೆ ಇದೂ ಕೂಡ ಮುಕ್ತಾಯವಾಗಲಿದೆ ಎನ್ನಲಾಗಿದೆ.
Comments