ರಾಕಿಂಗ್ ಸ್ಟಾರ್ ಯಶ್‌ಗೆ ಫಿದಾ ಆದ ಅಮೆರಿಕ ಹುಡುಗಿ
ರಾಕಿಂಗ್ ಸ್ಟಾರ್ ಯಶ್ ಅಭಿನಯ ನೋಡಿ ಅಮೆರಿಕದ ಹುಡುಗಿಯೊಬ್ಬಳು ಫಿದಾ ಆಗಿದ್ದಾರೆ. ಅಮೆರಿಕದಲ್ಲಿ ವಾಸವಿರುವ ಲಿಯೋ ಎಂ ಸೆಂಟ್ರಿಯೋ ಈ ಹುಡುಗಿ ಯಶ್‌ಗೆ ಹಾರ್ಡ್‌ಕೋರ್ ಫ್ಯಾನ್. ಅವರ ಅಭಿನಯದ ಎಲ್ಲಾ ಸಿನಿಮಾಗಳ ವಿಡಿಯೋ ಸಿಡಿಗಳನ್ನು ಕೊಂಡು ನೋಡಿರುವ ಅವರು ಈಗ ಕನ್ನಡವನ್ನೂ ಕಲಿಯುತ್ತಿದ್ದಾರೆ. ಯಶ್ ಸಾಮಾಜಿಕ ಕಾರ್ಯಗಳನ್ನು ತಿಳಿದು, ಬೆಂಬಲ ಸೂಚಿಸಲು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ 'ಐ ಸಪೋರ್ಟ್ ರಾಕಿ' ಎಂದು ಅಭಿಯಾನ ಶುರುಮಾಡಿದ್ದಾರೆ.
ಯಶ್ ಅಭಿನಯವನ್ನು ಅಪಾರವಾಗಿ ಮೆಚ್ಚಿಕೊಂಡಿರುವ ಲಿಯೋ ಯಶ್ ಬಗ್ಗೆ ಮಾತನಾಡಿರುವ ವಿಡಿಯೋ ಒಂದನ್ನು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದು, ಈಗ ವೈರಲ್ ಆಗಿದೆ. ಇದರಲ್ಲಿ ಅವರು ಹೇಗೆ ಯಶ್ ಫ್ಯಾನ್ ಆದರು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಯಶ್ ಇವರ ಕಣ್ಣಿಗೆ ಬಿದ್ದಿದ್ದು ಕೂಡಾ ಬಹಳ ಕುತೂಹಲಕಾರಿಯಾಗಿದೆ.
ಲಿಯೋ ಹಲವು ದೇಶಗಳನ್ನು ಧರ್ಮ ಪ್ರಚಾರಕ್ಕಾಗಿ ಸುತ್ತುವವರು. ಭಾರತದಲ್ಲೂ ಕೆಲಸ ಮಾಡುವ ಆಸೆಯಿಂದ ಹಿಂದಿ ಕಲಿಯಲು ನಿರ್ಧರಿಸಿದ್ದಾರೆ. ಅಮೆರಿಕದಲ್ಲಿ ಹಿಂದಿಯವರು ಗೊತ್ತಿಲ್ಲದ ಕಾರಣ 2 ವರ್ಷ ಪುಸ್ತಕದ ಸಹಾಯದಿಂದ ಕಲಿಯಲಾರಂಭಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಹಿಂದಿ ಸಿನಿಮಾಗಳನ್ನೂ ನೋಡಲು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಹಿಂದಿಗೆ ಡಬ್ ಆಗಿದ್ದ ಯಶ್ ಅಭಿನಯದ ಪವನ್ ಒಡೆಯರ್ ನಿರ್ದೇಶನದ 'ಗೂಗ್ಲಿ' ಸಿನಿಮಾ ನೋಡಿದ್ದಾರೆ. ಯಶ್ ಅಭಿನಯ, ಛಾಯಾಗ್ರಹಣ ಎಲ್ಲವೂ ಇವರ ಗಮನ ಸೆಳೆದಿದೆ. ನಂತರ ಯಶ್ ಅಭಿನಯದ ಸುಮನಾ ಕಿತ್ತೂರು ನಿರ್ದೇಶನದ ಕಳ್ಳರ ಸಂತೆ ಚಿತ್ರವನ್ನು ನೋಡಿದ್ದಾರೆ. 'ಕಳ್ಳರ ಸಂತೆ ಚಿತ್ರ ನೋಡಿದ ಮೇಲೆ ನಾನು ಯಶ್ ಫ್ಯಾನ್ ಆಗಿಬಿಟ್ಟೆ. ಅವರ ಎಲ್ಲಾ ಸಿನಿಮಾಗಳನ್ನು ನೋಡಲು ನಿರ್ಧರಿಸಿದೆ. ಕನ್ನಡದ ನಟ ಎಂಬುದನ್ನು ತಿಳಿದು ಕನ್ನಡವನ್ನೂ ಕಲಿಯುತ್ತಿದ್ದೇನೆ' ಎಂದಿದ್ದಾರೆ ಲಿಯೋ.
ಕರ್ನಾಟಕದ ಸಂಸ್ಕೃತಿ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಯಶ್ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಮಾಡಿರುವ ಕೆಲಸ ತಿಳಿದು ಬಹಳ ಸಂತೋಷ ಆಯ್ತು. ನಟನೆ ಜತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಪ್ರಶಂಸನೀಯ' ಎಂದು ಹೊಗಳಿದ್ದಾರೆ. ಯಶ್‌ಗೆ 'ರಾಕಿಂಗ್ ಸ್ಟಾರ್' ಎಂಬ ಹೆಸರನ್ನು ಕೊಟ್ಟ ರಾಕಿ ಚಿತ್ರದ ಅಭಿನಯ ಅತ್ಯುತ್ತಮ. ಈಗ ಅವರು ಕೆಜಿಎಫ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅಂತ ಗೊತ್ತಾಯಿತು. ಅವರಿಗೆ ಸಪೋರ್ಟ್ ಮಾಡಲು ಇದು ಸರಿಯಾದ ಸಮಯ ಎನ್ನಿಸಿತು' ಎಂದಿದ್ದಾರೆ ಲಿಯೋ .ಯಶ್ ಬಗ್ಗೆ ಬರುವ ಎಲ್ಲಾ ಸುದ್ದಿಗಳನ್ನು ಫಾಲೋ ಮಾಡುತ್ತಿರುವ ಲಿಯೋ ರಾಕಿ ಚಿತ್ರದ ಬಗ್ಗೆ ಕನ್ನಡಿಗರ ಅಭಿಪ್ರಾಯವನ್ನು ತಿರಸ್ಕರಿಸಿದ್ದಾರೆ. 'ರಾಕಿ ಚಿತ್ರ ಪೂರ್ ಅಂತ ನನ್ನ ಕನ್ನಡಿಗ ಸ್ನೇಹಿತರು ಹೇಳುತ್ತಿದ್ದರು ಇದು ಸುಳ್ಳು. ಚೆನ್ನಾಗಿಲ್ಲ ಎಂದವರನ್ನು ಸಿನಿಮಾ ನೋಡಿದ್ದೀರಾ ಎಂದು ಕೇಳಿದರೆ ಇಲ್ಲಾ ಎನ್ನುತ್ತಿದ್ದರು,ಇದು ಸರಿಯಲ್ಲ. ಸ್ವಮೇಕ್ ಚಿತ್ರ ರಾಕಿ ತ್ರಿವೇಣಿ ಚಿತ್ರಮಂದಿರದಲ್ಲಿ ಮೂರು ವಾರ ಪ್ರದರ್ಶನವಾಗಿದೆ' ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಈಗ ಅವರು ಅಂತರ್ಜಾಲ ತಾಣದಲ್ಲಿ #isupportrocky ಹೆಸರಿನಲ್ಲಿ ಎಲ್ಲರೂ ಬೆಂಬಲ ಸೂಚಿಸಲು ಕೋರಿದ್ದಾರೆ.
Comments