ವಿಮರ್ಶಕರು 'ಕಾಲೇಜ್ ಕುಮಾರ'ನ ಬಗ್ಗೆ ಏನಂದ್ರು?

ಅಲೆಮಾರಿ' ಖ್ಯಾತಿಯ ಸಂತು ನಿರ್ದೇಶನ ಮಾಡಿದ್ದು, 'ಕೆಂಡಸಂಪಿಗೆ' ಖ್ಯಾತಿಯ ವಿಕ್ಕಿ, ಸಂಯುಕ್ತ ಹೆಗಡೆ, ರವಿಶಂಕರ್, ಶ್ರುತಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಜನರ ಮೆಚ್ಚಿಕೊಂಡಿದ್ದು
ಕಾಲೇಜ್ ಕುಮಾರ' ಕ್ಲಾಸಿಕ್ ಫ್ಯಾಮಿಲಿ ಸಬ್ಜೆಕ್ಟ್ ಇರುವ ಚಿತ್ರ ಎನ್ನುವಂತೆ ಚಿತ್ರಕತೆ ಹೆಣೆದಿದ್ದಾರೆ ನಿರ್ದೇಶಕರು. ತಂದೆ ತಾಯಿಯರ ಕನಸನ್ನು ಈಡೇರಿಸಲು ಆಗದ ಮಗ ಮತ್ತು ತಂದೆಯ ಕನಸನ್ನು ತಂದೆಯೇ ಈಡೇರಿಸಿಕೊಳ್ಳಲು ಮಗನೇ ಬೆನ್ನಲುಬಾಗಿ ನಿಲ್ಲುವ ಕತೆ ಇಲ್ಲಿದೆ. ಆ ಲಾಸ್ಟ್ ಬೆಂಚ್ ಹುಡುಗನಾಗಿ, ಮಧ್ಯಮ ವರ್ಗದ ತಲೆಗೆ ವಿದ್ಯೆ ಹತ್ತದ ಯುವಕನಾಗಿ ಮತ್ತು ಯುವ ಪ್ರೇಮಿಯಾಗಿ ವಿಕ್ಕಿ ವರುಣ್ ನೈಜವಾಗಿ ನಟಿಸಿದ್ದಾರೆ. ಖಳ ನಟ ರವಿಶಂಕರ್ ವಿಶಿಷ್ಟ ಮತ್ತು ವಿಭಿನ್ನವಾಗಿ ನಟಿಸಿ ಪ್ರೇಕ್ಷಕರನ್ನು ಕಾಡಿಸಿ, ಅಳಿಸಿ, ನಗಿಸುತ್ತಾರೆ. ಸಂಯುಕ್ತಾ ಹೆಗಡೆ ತಮಗೆ ಸಿಕ್ಕ ಅವಕಾಶವನ್ನು ಸಖತ್ ಕಿಲ್ಲಿಂಗ್ ಆಗಿ ಬಳಸಿಕೊಂಡಿದ್ದಾರೆ. ಶ್ರುತಿ ತಮ್ಮ ಪಾತ್ರಕ್ಕೆ ಎಂದಿನಂತೆ ನ್ಯಾಯ ಒದಗಿಸಿದ್ದಾರೆ.
ಮೊದಲಾರ್ಧವು ಮಗನನ್ನು ಓದಿಸುವಲ್ಲಿಯೇ ಅಪ್ಪ ಪಡುವ ಶ್ರಮಕ್ಕೆ ಮೀಸಲು. ಚಿತ್ರದ ಟ್ರೇಲರ್ ನಲ್ಲಿ ಕಂಡ ದೃಶ್ಯಗಳೇ ಮೊದಲಾರ್ಧದಲ್ಲಿ ಸುರುಳಿ ಸುತ್ತುತ್ತವೆ. ಇದನ್ನು ಕಂಡು ಪ್ರೇಕ್ಷಕರಿಗೂ ತಬ್ಬಿಬ್ಬು!. ದ್ವಿತೀಯಾರ್ಧದಲ್ಲಿ ರವಿಶಂಕರ್ ಅವರೇ ನಾಯಕ. ಅಲ್ಲಿ ನಾಯಕ ಮತ್ತು ನಾಯಕಿ ಹಿನ್ನೆಲೆಗೆ ಸರಿದು ರವಿಶಂಕರ್ ಅವರ ಕಾಲೇಜಿನ ಕಥನ ಮುನ್ನೆಲೆಗೆ ಬರುತ್ತದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಎರಡು ಹಾಡುಗಳು ಕೇಳಲು ಹಿತವಾಗಿವೆ. ಮಕ್ಕಳ ಕಂಗಳಲ್ಲಿ ಭವಿಷ್ಯ ಕಂಡಿರುವ ಪೋಷಕರು ಮತ್ತು ಕಾಲೇಜಿನ ಮಹತ್ವ ಅರಿಯಬೇಕಾದ ವಿದ್ಯಾರ್ಥಿಗಳು ನೋಡಬಹುದಾದ ಸಿನಿಮಾ 'ಕಾಲೇಜ್ ಕುಮಾರ್'.
Comments