ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗೋದ್ಯಾರು..?

ಈ ವಾರ 8 ಮಂದಿ ನಾಮಿನೇಟ್ ಆಗಿದ್ದು, ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಅನುಪಮಾ, ಸಿಹಿಕಹಿ ಚಂದ್ರು, ಜಯಶ್ರೀನಿವಾಸನ್, ಜಗನ್, ಕಾರ್ತಿಕ್, ನಿವೇದಿತಾ, ಸಮೀರಾಚಾರ್ಯ ಹಾಗೂ ತೇಜಸ್ವಿನಿ ಅವರು ನಾಮಿನೇಟ್ ಆಗಿದ್ದಾರೆ.
ಸಿಹಿಕಹಿ ಚಂದ್ರು ಅವರ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಅವರ ಪತ್ನಿ ಗೀತಾ ಮಾತನಾಡಿದ್ದಾರೆ. ಮದುವೆಗೆ ಮೊದಲಿನ ಘಟನೆಯೊಂದನ್ನು ನೆನಪಿಸಿದ ಅವರು ಶುಭಾಶಯ ಹೇಳಿದ್ದಾರೆ. ತಮ್ಮ ಪತ್ನಿ ಹುಟ್ಟುಹಬ್ಬದ ಪ್ರಯುಕ್ತ ಸಮೀರಾಚಾರ್ಯ ಶುಭಾಶಯ ಹೇಳಿದ್ದು, ಅವರಿಗೆ ಪತ್ನಿಯ ಹಾಡನ್ನು ಕೇಳಿಸಲಾಗಿದೆ. ಚಂದ್ರು ಹಾಗೂ ಆಚಾರ್ಯ ಅವರಿಗೆ ಮನೆಯ ಸದಸ್ಯರು ಶುಭಾಶಯ ಹೇಳಿದ್ದಾರೆ. ಲಕ್ಸುರಿ ಬಜೆಟ್ ಟಾಸ್ಕ್ ಗಾಗಿ ನೀಡಲಾಗಿದ್ದ ನೀರಿನ ಕ್ಯಾನ್ ಹಿಡಿದಿಟ್ಟುಕೊಳ್ಳುವ ಸವಾಲ್ ನಲ್ಲಿ ಸದಸ್ಯರೆಲ್ಲಾ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಕ್ಯಾನ್ ಹಿಡಿದುಕೊಂಡಿದ್ದ ಸಂದರ್ಭದಲ್ಲಿ ನಿವೇದಿತಾ ಸದಸ್ಯರ ಸೇವೆಯನ್ನು ಮಾಡಿದ್ದು ಮತ್ತು ಯಾರಿಗಾದರೂ ಕೆರೆಯಬೇಕೆ ಎಂದಿದ್ದು ತಮಾಷೆಯಾಗಿತ್ತು.
ದಿವಾಕರ್ ಬಳಿ ಮಾತನಾಡುತ್ತಿದ್ದ ಜಯಶ್ರೀನಿವಾಸನ್, ಆ ಮಾತನ್ನು ನಾವು 5 ಜನರಿದ್ದಾಗ ಮಾತ್ರ ಹೇಳಬೇಕೆಂದು ಸೂಚಿಸಿದ್ದಕ್ಕೆ ಚಂದ್ರು ಆಕ್ಷೇಪಿಸಿದ್ದಾರೆ. ನೀವು 5 ಮಂದಿ ಇದ್ದಾಗ ಮಾತ್ರ ಹೇಳುವುದಾದರೆ, ನೀವು ಗುಂಪುಗಾರಿಕೆ ಮಾಡಿದಂತೆ. ಅದಕ್ಕೆಲ್ಲಾ ಆಸ್ಪದ ಕೊಡಬೇಡಿ ಎಂದು ತಿಳಿಸಿದ್ದಾರೆ. ಇದನ್ನು ಸದಸ್ಯರೆಲ್ಲರ ಸಮ್ಮುಖದಲ್ಲಿ ಮತ್ತು ಪ್ರತ್ಯೇಕವಾಗಿ ಚಂದ್ರು ತಿಳಿಸಿದ್ದು, ಮನೆಯಲ್ಲಿ ಅವರ ಸ್ಥಾನವೇನೆಂಬುದನ್ನು ತಿಳಿಸಿಕೊಟ್ಟಂತಿತ್ತು. ಕ್ಯಾಪ್ಟನ್ ಆಗಿದ್ದ ರಿಯಾಜ್, ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಕಾರ್ತಿಕ್ ಅವರನ್ನು ಆಯ್ಕೆ ಮಾಡಿದ್ದಾರೆ. ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಯಾಗಿ ಅವರು ತಮ್ಮನ್ನೇ ಆಯ್ಕೆ ಮಾಡಿಕೊಂಡರೂ, 'ಬಿಗ್ ಬಾಸ್' ತಮಗೆ ತಾವೇ ಆಯ್ಕೆ ಮಾಡಿಕೊಳ್ಳುವಂತಿಲ್ಲ ಎಂದು ತಿಳಿಸಿದ ಬಳಿಕ ಸಮೀರಾಚಾರ್ಯ ಅವರಿಗೆ ಕಳಪೆ ಫಲಕ ನೀಡಿದ್ದಾರೆ. ಒಲ್ಲದ ಮನಸಿನಿಂದಲೇ ಅದನ್ನು ಸ್ವೀಕರಿಸಿದ ಸಮೀರಾಚಾರ್ಯ ಕ್ಯಾಮೆರಾ ಎದುರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Comments