ಶಂಕರ್ ನಾಗ್ ರವರೊಂದಿಗಿನ ಒಡನಾಟ ಹಂಚಿಕೊಂಡ ಉಪೇಂದ್ರ

ನಟ ಉಪೇಂದ್ರ ಕೂಡ ಶಂಕರ್ ನಾಗ್ ಅವರ ದೊಡ್ಡ ಫ್ಯಾನ್. ಅನೇಕರು ಉಪೇಂದ್ರ ಅವರನ್ನು ಶಂಕರ್ ನಾಗ್ ಅವರಿಗೆ ಹೋಲಿಸುತ್ತಾರೆ. ಹೀಗಿರುವಾಗ ಉಪೇಂದ್ರ ಮತ್ತು ಶಂಕರ್ ಒಮ್ಮೆ ಒಟ್ಟಿಗೆ ಕಾರ್ ನಲ್ಲಿ ಪ್ರಯಾಣ ಮಾಡಿದ್ದರು. ಆ ವಿಷಯವನ್ನು ಈ ಹಿಂದೆ ಉಪೇಂದ್ರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು.
'ಸಂಕೇತ್ ಸ್ಟುಡಿಯೋದಲ್ಲಿ ಅವರನ್ನು(ಶಂಕರ್ ನಾಗ್) ಮೊದಲು ನಾನು ಭೇಟಿ ಮಾಡಿದೆ. ಅವರ ದೊಡ್ಡ ಫ್ಯಾನ್ ಆಗಿದ್ದ ನಾನು ಅವರಿಗೆ ಕಥೆ ಹೇಳುವಾಗ ರೋಮಾಂಚನ ಆಯ್ತು. ಅವರು ಎಷ್ಟು ಸ್ಪೀಡ್ ಇದ್ದರು ಅಂದರೆ. ಪಟ.. ಪಟ.. ಅಂತ ಎಲ್ಲ ಕೆಲಸ ಮಾಡುತ್ತಿದ್ದರು. ಶೂಟಿಂಗ್ ನಲ್ಲಿಯೂ ಎಲ್ಲವನ್ನು ಸ್ಪೀಡ್ ಆಗಿ ಮಾಡುತ್ತಿದ್ದರು. ಅವರನ್ನು ನೋಡುವುದೇ ಒಂದು ಖುಷಿ. ಅಷ್ಟು ಬಿಜಿ ಆಗಿದ್ದರು. ಒಂದು ಸಾರಿ ಶೂಟಿಂಗ್ ನಿಂದ ಮನೆಗೆ ಹೊರಡುವಾಗ 'ಬರ್ತಿನಿ ಉಪೇಂದ್ರ' ಅಂತ ಹೇಳಿ ಹೋದರು. ಆಗ ನನ್ನ ಹೆಸರು ಇವರಿಗೆ ನೆನಪಿದೆ ಅಂತ ತುಂಬ ಖುಷಿ ಆಗಿತ್ತು. ಈಗಲೂ ನಮ್ಮ ಆಫೀಸ್ ನಲ್ಲಿ ಅವರ ಫೋಟೋ ಇವೆ. ನಾನು ಮಲಗುವಾಗ ಅವರ ಫೋಟೋ ನೋಡಿ ಮಲಗಬೇಕು. ಎದ್ದಾಗ ಅವರ ಫೋಟೋ ನೋಡಿ ಏಳಬೇಕು ಅಂತ.
ಆ ಸಮಯಕ್ಕೆ ಅವರ 'ತರ್ಕ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಒಮ್ಮೆ ನಾನು ಅವರು ಕಾರ್ ನಲ್ಲಿ ಹೋಗುವಾಗ 'ಸರ್ ತರ್ಕ ಹಿಟ್ ಆಗಿದೆ. ನೂರು ದಿನದ ಕಾರ್ಯಕ್ರಮ ಮಾಡಬಹುದಲ್ವಾ' ಅಂದೆ. ಅದಕ್ಕೆ ಅವರು 'ಏನ್ ಉಪೇಂದ್ರ ಪಾಪ.. ಅವರಿಗೆ ಚಿತ್ರದಿಂದ ಸ್ವಲ್ಪ ದುಡ್ಡು ಸಿಕ್ಕಿದೆ. ಸುಮ್ಮನೆ ಕಾರ್ಯಕ್ರಮ ಮಾಡುವುದು ಯಾಕೆ. ಅವರು ಚೆನ್ನಾಗಿರಲಿ' ಅಂತ ಹೇಳಿದರು. ನನ್ನ ಸಿನಿಮಾ.. ನನಗೆ ಹೆಸರು ಸಿಗಲಿ ಎನ್ನುವುದು ಯಾವುದು ಅವರಲ್ಲಿ ಇರಲಿಲ್ಲ. ಅಂತಹ ವ್ಯಕ್ತಿಗಳು ಬಹಳ ವಿರಳ. ನನ್ನ ಜೀವನದಲ್ಲಿ ಕೇಳಿದ ಸಾವಿನ ಸುದ್ದಿಗಳಲ್ಲಿ ತುಂಬಾ ಶಾಕಿಂಗ್ ಅಂದರೆ ಅವರದ್ದು. ಕಲ್ಪನೆಯೂ ಮಾಡಿಕೊಳ್ಳುವುದಕ್ಕೆ ಆಗಲಿಲ್ಲ. ಆ ಸುದ್ದಿ ಬಂದಾಗ ಸುಳ್ಳು ಇರಬೇಕು ಎಂದುಕೊಂಡೆ. ಶಂಕರ್ ಸರ್ ಇಲ್ಲ ಅಂದರೆ ಅದನ್ನು ಅರಗಿಸಿಕೊಳ್ಳುವುದಕ್ಕೆ ಆಗಲಿಲ್ಲ. ಅವರ ಆ ನಗು ಮುಖ ಹಾಗೆ ಇರಲಿ ಎಂದು ಅವರ ಅಂತ್ಯಸಂಸ್ಕಾರಕ್ಕೂ ಹೋಗಲಿಲ್ಲ.
Comments