'ವಜ್ರೇಶ್ವರಿ ಕಂಬೈನ್ಸ್'ನಲ್ಲಿ ಮತ್ತೆ ಪುನೀತ್ ಸಿನಿಮಾ.!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇತ್ತೀಚೆಗಷ್ಟೇ 'PRK' (ಪಾರ್ವತಮ್ಮ ರಾಜ್ ಕುಮಾರ್) ನಿರ್ಮಾಣ ಸಂಸ್ಥೆಯನ್ನ ಸ್ಥಾಪಿಸಿ, ಹೊಸಬರ ಚಿತ್ರಗಳನ್ನ ನಿರ್ಮಿಸುತ್ತಿದ್ದಾರೆ. ಅದರ ಜೊತೆ ತಮ್ಮದೇ ಚಿತ್ರವನ್ನ ಕೂಡ ಈ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಿದ್ದಾರೆ.
ಹೀಗಿರುವಾಗ, ಪಾರ್ವತಮ್ಮ ರಾಜ್ ಕುಮಾರ್ ಸಾರಥ್ಯದ 'ವಜ್ರೇಶ್ವರಿ ಕಂಬೈನ್ಸ್'ನಲ್ಲಿ ಪುನೀತ್ ಮತ್ತೆ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಸುಮಾರು 5 ವರ್ಷದ ನಂತರ ಅಮ್ಮನ ಬ್ಯಾನರ್ ನಲ್ಲಿ ಅಪ್ಪು ಸಿನಿಮಾ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರವನ್ನ ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸಮರ್ಪಣೆ ಮಾಡುವ ಸಲುವಾಗಿ ನಿರ್ಮಾಣ ಮಾಡುತ್ತಿದ್ದಾರಂತೆ.
'ವಜ್ರೇಶ್ವರಿ ಕಂಬೈನ್ಸ್' ಬ್ಯಾನರ್ ನಡಿ ನಿರ್ಮಾಣವಾಗಲಿರುವ ಚಿತ್ರವನ್ನ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರದಲ್ಲಿ ಪುನೀತ್ ನಾಯಕನಾಗಿ ನಟಿಸಲಿದ್ದಾರೆ.'ವಜ್ರೇಶ್ವರಿ ಕಂಬೈನ್ಸ್' ಮೊದಲಿನಿಂದಲೂ ಕಥೆಗೆ ಪ್ರಾಮುಖ್ಯತೆ ನೀಡುತ್ತಾ ಬಂದಿದೆ, ಹೀಗಾಗಿ, ಒಳ್ಳೆಯ ಕಥೆಗಾಗಿ ರಾಘಣ್ಣ ಹುಡುಕುತ್ತಿದ್ದಾರಂತೆ. ಈಗಾಗಲೇ ಹಲವರು ಕಥೆ ಹೇಳಿದ್ದಾರಂತೆ. ಒಂದೊಳ್ಳೆಯ ಕಥೆಯನ್ನ ಆಯ್ಕೆ ಮಾಡಿ ಸಿನಿಮಾ ಮಾಡಲು ಚಿಂತಿಸಿದ್ದಾರೆ.ಉತ್ತಮವಾದ ಕಥೆಗಾಗಿ ಕಾಯುತ್ತಿರುವ ರಾಘಣ್ಣ, ನಿರ್ದೇಶಕರಿಗಾಗಿ ಕೂಡ ಹುಡುಕಾಟ ನಡೆಸುತ್ತಿದ್ದಾರಂತೆ. ಯಾವುದೇ ಹಿಟ್ ಸಿನಿಮಾ ನೀಡಿದ್ದಾರೆ ಎಂಬ ಮಾನದಂಡ ನಮಗೆ ಬೇಕಾಗಿಲ್ಲ ಎಂದು ಹೇಳುವ ಮೂಲಕ ಪ್ರತಿಭಾನ್ವಿತ ನಿರ್ದೇಶಕರಿಗೆ ಅವಕಾಶ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.
Comments