ಪ್ರಭಾಸ್ ಹುಟ್ಟುಹಬ್ಬಕ್ಕೆ ಸಾಹೊ ಫಸ್ಟ್ ಲುಕ್ ರಿಲೀಸ್

ತಮಗೆ ಜನ್ಮದಿನದ ಶುಭಾಶಯಗಳ ಮಹಾಪೂರವನ್ನೇ ಹರಿಸಿ ಹಾರೈಸಿರುವ ಅಸಂಖ್ಯಾತ ಅಭಿಮಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಪ್ರಭಾಸ್, ಸಾಹೊ ಪೋಸ್ಟರ್ ಬಿಡುಗಡೆಗೊಳಿಸಲು ತಮ್ಮ ಅಧಿಕೃತ ಫೇಸ್‍ಬುಕ್ ಪೇಜ್‍ನನ್ನು ಬಳಸಿದ್ದಾರೆ.
ಬಾಹುಬಾಲಿ ಖ್ಯಾತಿಯ ಜನಪ್ರಿಯ ನಟ ಪ್ರಭಾಸ್‍ಗೆ ಇಂದು 38ನೇ ಜನ್ಮದಿನದ ಸಡಗರ-ಸಂಭ್ರಮ. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಕೊಡುಗೆ ನೀಡಿ ಪುಳಕಗೊಳಿಸಿದ್ದಾರೆ. ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಮುಂದಿನ ಸಿನಿಮಾ ಸಾಹೊ ಫಸ್ಟ್ ಲುಕ್ ಪೋಸ್ಟರ್ ಅನ್ನು ಇದೇ ದಿನ ಅನಾವರಣಗೊಳಿಸಲಾಗಿದೆ. ನಿಮ್ಮೆಲ್ಲರ ಶುಭಾಶಯ ಮತ್ತು ಪ್ರೀತಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಇಲ್ಲಿ ನಿಮಗಾಗಿ ಸಾಹೊ ಚಿತ್ರದ ತುಣುಕು ಇದೆ ಎಂದು ಪ್ರಬಾಸ್ ಪೋಟೊಗೆ ಶೀರ್ಷಿಕೆ ನೀಡಿದ್ದಾರೆ. ಸಾಹೂ ಫಸ್ಟ್ ಲುಕ್ ಪೋಸ್ಟರ್ ಆಕರ್ಷಕವಾಗಿದೆ. ಪರಿಪೂರ್ಣ ಕಪ್ಪು ಉಡುಗೆ (ಉದ್ದನೆಯ ಕೋಟು) ಹಾಗೂ ಅರ್ಧ ಮುಚ್ಚಿದ ಮಾಸ್ಕ್ ಧರಿಸಿದ ನೀಳಕಾಯದ ಪ್ರಭಾಸ್ ದಟ್ಟ ಹೊಗೆಯಿಂದ ಆವೃತವಾದ ನಗರದ ಬೀದಿಯಲ್ಲಿ ಪ್ಯಾಂಟ್ ಜೇಬಿನಲ್ಲಿ ಕೈ ಇಟ್ಟುಕೊಂಡು ನಡೆಯುತ್ತಿರುವ ಚಿತ್ರ ಇದಾಗಿದೆ. ಅಚ್ಚರಿಯ ಸಂಗತಿ ಎಂದರೆ ಬಾಹುಬಲಿ: ದಿ ಕನ್‍ಕ್ಲೂಷನ್ (ಬಾಹುಬಲಿ ಎರಡನೇ ಭಾಗ) ಸಿನಿಮಾದ ಫಸ್ಟ್ ಪೋಸ್ಟರ್ ಕೂಡ ಕಳೆದ ವರ್ಷ ಪ್ರಭಾಸ್ ಬರ್ತ್ ಡೇ ದಿನದಂದೇ ಬಿಡುಗಡೆಯಾಗಿತ್ತು. ಸುಜೀತ್ ರೆಡ್ಡಿ ನಿರ್ದೇಶನದ ಸಾಹೂ ಚಿತ್ರದಲ್ಲಿ ಬಾಲಿವುಡ್ ತಾರೆಯರಾದ ಶ್ರದ್ಧಾ ಕಪೂರ್, ಜಾಕೀ ಶ್ರಾಫ್, ಚಂಕಿ ಪಾಂಡೆ ಮತ್ತು ಮಂದಿರಾ ಬೇಡಿ ನಟಿಸುತ್ತಿದ್ದಾರೆ.
Comments