ಸಿನಿಮಾ ನಟಿಯರಿಗೂ ದೀಪಾವಳಿ ಹಬ್ಬ ಸಖತ್ ವಿಶೇಷ ಅಂತೆ ಯಾಕೆ ಗೊತ್ತಾ?

ಯಾವಾಗಲೂ ಸಿನಿಮಾದ ಕೆಲಸದಲ್ಲಿ ಬಿಜಿ ಇರುವ ನಟಿಯರು ಹಬ್ಬವನ್ನು ಮರೆಯದೆ ಮನೆಯವರ ಜೊತೆ ಆಚರಿಸುತ್ತಾರಂತೆ. ಇನ್ನೂ ಕನ್ನಡದ ನಟಿಯರಾದ ಶ್ರದ್ಧಾ ಶ್ರೀನಾಥ್, ಮಯೂರಿ, ಆಶಿಕಾ ರಂಗನಾಥ್, ಅದಿತಿ ಪ್ರಭುದೇವ ಹಬ್ಬದ ಬಗ್ಗೆ ಮಾತನಾಡಿದ್ದಾರೆ.ಹಬ್ಬ ಅಂದರೆ ಒಂದು ಸಂಭ್ರಮ. ಅದರಲ್ಲೂ ದೀಪಾವಳಿ ಅಂದರೆ ಕೇಳಬೇಕಾ.? ಎಲ್ಲರ ಮನೆಯಲ್ಲೂ ಸಂತೋಷ ಸಡಗರ. ಇನ್ನು ಸಿನಿಮಾ ನಟಿಯರಿಗೂ ಕೂಡ ದೀಪಾವಳಿ ಹಬ್ಬ ಎನ್ನುವುದು ಸಖತ್ ವಿಶೇಷ.
'ನಾನು ಮೂಲತಃ ಹುಬ್ಬಳಿಯವಳು. ನಮ್ಮ ಮನೆಯಲ್ಲಿ ಪ್ರತಿ ಹಬ್ಬವನ್ನೂ ಅದ್ದೂರಿಯಾಗಿ ಮಾಡುತ್ತೇವೆ. ಅದ್ದೂರಿ ಅಂದರೆ ಹಣದಿಂದ ಅಲ್ಲ. ದೇವರ ಪೂಜೆಯಿಂದ.. ಶ್ರದ್ಧೆ ಭಕ್ತಿಯಿಂದ ದೇವರಿಗೆ ಪೂಜೆ ಮಾಡಿ ನೈವೇದ್ಯ ಮಾಡುವ ತನಕ ನಾನು ಊಟ ಮಾಡುವುದಿಲ್ಲ. ಮುಂಚೆ ನಮ್ಮ ತಂದೆ ಪೂಜೆ ಮಾಡುತ್ತಿದ್ದರು. ಅವರು ತೀರಿಕೊಂಡ ನಂತರ ಈಗ ನಾನೇ ಪೂಜೆ ಮಾಡುತ್ತೇನೆ. ನಮ್ಮ ಹಬ್ಬದ ಆಚರಣೆಯಲ್ಲಿ ಆಡಂಬರ ಇಲ್ಲ ಭಕ್ತಿ ಇದೆ.'' - ಮಯೂರಿ, ನಟಿ
'ನಮ್ಮ ಮನೆಯಲ್ಲಿ ದೀಪಾವಳಿ ಅದ್ಧೂರಿ ಅಂತ ಏನು ಇಲ್ಲ. ಹೆಣ್ಣು ಮಕ್ಕಳು ಇರುವುದರಿಂದ ವರಮಹಾಲಕ್ಷ್ಮಿ ಹಬ್ಬವನ್ನು ಜೋರಾಗಿ ಮಾಡುತ್ತೇವೆ. ಬಾಕಿ ಹಬ್ಬವನ್ನು ಸಾಧಾರಣವಾಗಿ ಆಚರಿಸುತ್ತೇವೆ. ಚಿಕ್ಕ ವಯಸ್ಸಿನಲ್ಲಿ ಹಬ್ಬದ ಊಟ ಆದರೆ ತುಂಬ ಖುಷಿ. ಈಗ ಬೆಳಗ್ಗೆ ಪೂಜೆ ಮಾಡುತ್ತೇವೆ. ಸಂಜೆ ಅರಿಶಿಣ ಕುಂಕುಮಕ್ಕೆ ನಾನು ಅಕ್ಕ ಹೋಗುತ್ತೇವೆ. ಮನೆಯಲ್ಲಿ ದೀಪದಿಂದ ಅಲಂಕಾರ ಮಾಡಿ ಸಿಂಪಲ್ ಆಗಿ ಹಬ್ಬ ಮಾಡುತ್ತೇವೆ'' - ಆಶಿಕಾ, ನಟಿ
''ಹಬ್ಬದ ದಿನ ಮುಂಚೆಯಿಂದ ಅಮ್ಮ ಬೆಳಗ್ಗೆ ಪೂಜೆ ಮಾಡುತ್ತಾರೆ. ಸಂಜೆ ದೀಪ ಹಚ್ಚಿ, ರಂಗೋಲಿ ಹಾಕಿ, ಎಲ್ಲ ಕಡೆ ಹೂವಿನ ಅಲಂಕಾರ ಮಾಡುತ್ತೇವೆ. ನಮ್ಮ ಮನೆಯಲ್ಲಿ ಪಟಾಕಿ ಹೊಡೆಯುವುದಿಲ್ಲ. ಸುಮಾರು ವರ್ಷದಿಂದ ನಿಲ್ಲಿಸಿದ್ದೇವೆ. ಆಮೇಲೆ ಎಲ್ಲ ಸಂಬಂಧಿಗಳ ಮನೆಗೆ ಹೋಗಿ ಖುಷಿಯಾಗಿ ಮಾತನಾಡಿಕೊಂಡು ಬರುತ್ತೇವೆ. ಇಷ್ಟೆ ಈ ರೀತಿ ಇರುತ್ತದೆ ನಮ್ಮ ದೀಪಾವಳಿ'' - ಶ್ರದ್ಧಾ ಶ್ರೀನಾಥ್, ನಟಿ
''ನನಗೆ ದೀಪಾವಳಿ ಅಂದರೆ ಇಷ್ಟ. ಯಾಕಂದ್ರೆ ನನಗೆ ದೀಪ ಅಂದರೆ ತುಂಬ ಇಷ್ಟ. ಪವರ್ ಇದ್ದರೂ ಕೆಲವು ಸಾರಿ ನನ್ನ ರೂಮಿನಲ್ಲಿ ಕ್ಯಾಂಡಲ್ ಹಚ್ಚಿಕೊಳ್ಳುತ್ತೇನೆ. ಸೋ, ದೀಪಾವಳಿ ಅಂದರೆ ದೀಪಗಳ ಹಬ್ಬ. ಆ ದಿನ ರಾತ್ರಿ ಟೆರೆಸ್ ಮೇಲೆ ಹೋಗಿ ನೋಡಿದಾಗ ಎಲ್ಲ ಕಡೆ ದೀಪ ಹಚ್ಚಿರುತ್ತಾರೆ. ನಮ್ಮ ದಾವಣಗೆರೆ ಕಡೆ ತುಂಬ ಚೆನ್ನಾಗಿ ಇರುತ್ತದೆ. ಸಿಹಿ ಅಂದರೆ ನನಗೆ ತುಂಬ ಇಷ್ಟ. ಹಬ್ಬದ ದಿನ ಎಷ್ಟು ಬೇಕಾದರೂ ಸಿಹಿ ತಿನ್ನಬಹುದು'' - ಅಧಿತಿ ಪ್ರಭುದೇವ, ನಟಿ
''ನನಗೆ ದೀಪಾವಳಿ ಫೇವರೆಟ್ ಹಬ್ಬ. ಚಿಕ್ಕ ವಯಸ್ಸಿನಲ್ಲಿ ತಾತನ ಮನೆಗೆ ಹೋಗಿ ಅಲ್ಲಿ ಎಲ್ಲರ ಜೊತೆ ಆಚರಣೆ ಮಾಡುತ್ತಿದೆವು. ಆಗ ದೀಪಾವಳಿ ಅಂದರೆ ಹೊಸ ಬಟ್ಟೆ, ಜೊತೆಗೆ ಎಲ್ಲರ ಮನೆಯಲ್ಲಿ ದೀಪ ಇರುತ್ತಿತ್ತು. ಅದೆಲ್ಲವು ಈಗ ಸಿಹಿ ನೆನಪು.'' - ರಾಧಿಕಾ ಚೇತನ್, ನಟಿ
Comments