ಬಿಗ್ ಬಾಸ್ ಸೀಸನ್-5 ಸೆಲೆಬ್ರಿಟಿ ಪಟ್ಟಿಯಲ್ಲಿ ಯಾರಿದ್ದಾರೆ ಗೊತ್ತಾ?

ಬೆಂಗಳೂರು: ನಟ ಕಿಚ್ಚಾ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 5 ರಿಯಾಲಿಟಿ ಷೋಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಅಕ್ಟೋಬರ್ 8ರಿಂದ ಕಾರ್ಯಕ್ರಮ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಪತ್ರಿಕೆಯೊಂದು ವರದಿ ಮಾಡಿರುವಂತೆ, ಒಟ್ಟು 100 ದಿನಗಳ ಕಾಲ ನಡೆಯುವ ಈ ಬಹು ನಿರೀಕ್ಷಿತ ರಿಯಾಲಿಟಿ ಷೋನಲ್ಲಿ ಈ ಬಾರಿ ಸೆಲೆಬ್ರಿಟಿಗಳು ಮಾತ್ರವಲ್ಲದೇ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದೆಯಂತೆ. ಸೆಲೆಬ್ರಿಟಿಗಳೊಂದಿಗೆ ಅರ್ಧದಷ್ಟು ಜನಸಾಮಾನ್ಯರು ಬಿಗ್ ಹೌಸ್ ನೊಳಗೆ ಪ್ರವೇಶ ಪಡೆಯಲು ತೀವ್ರ ಪೈಪೋಟಿ ಎದುರಾಗಿದ್ದು, ಈ ಬಾರಿ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ಕಳೆದ ಸೀಸನ್ 3 ನಲ್ಲಿಯೇ ಇಂತಹುದೊಂದು ಪ್ರಯೋಗಕ್ಕೆ ಬಿಗ್ ಬಾಸ್ ತಂಡ ಮುಂದಾಗಿತ್ತು. ಅದರಂತೆ ನೇಹಾಗೌಡ, ಜಯಶ್ರೀ ಅವರನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗಿತ್ತು. ಈ ಬಾರಿ ಚಿತ್ರರಂಗ, ಟೆಲಿವಿಷನ್ ರಂಗದ ಗಣ್ಯರು ಸೇರಿದಂತೆ ಜನ ಸಾಮಾನ್ಯರು ಕೂಡ ಬಿಗ್ ಹೌಸ್ ನಲ್ಲಿ ಕಾಣಸಿಗಲಿದ್ದಾರೆ.
ಪತ್ರಿಕೆಯೊಂದು ವರದಿ ಮಾಡಿರುವಂತೆ ಈ ಬಾರಿ ಬಿಗ್ ಹೌಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇಷ್ಟಕಾಮ್ಯ ಚಿತ್ರದ ನಾಯಕಿ ಕಾವ್ಯಾಶೆಟ್ಟಿ, ನಟ ಕೋಮಲ್, ನಟಿ ತಾರಾ, ನಟ ಸುನಿಲ್ ರಾವ್, ನಿರ್ದೇಶಕ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್, ನಟ ದಿಗಂತ್, ಹಾಸ್ಯ ನಟ ರಾಜು ತಾಳಿಕೋಟೆ, ಒಗ್ಗರಣೆ ಡಬ್ಬಿ ಕಾರ್ಯಕ್ರಮ ನಿರೂಪಕ ಮುರಳಿ ಸೇರಿದಂತೆ ಹಲವು ಗಣ್ಯರ ಹೆಸರುಗಳು ಕೇಳಿಬರುತ್ತಿವೆ. ಒಟ್ಟು 16 ಮಂದಿ ಸ್ಪರ್ಧಿಗಳ ಪೈಕಿ 7 ಅಥವಾ 8 ಮಂದಿ ಸ್ಪರ್ಧಿಗಳು ಸೆಲೆಬ್ರಿಟಿಗಳಾದರೆ. ಉಳಿದ 7 ಅಥವಾ 8 ಮಂದಿ ಜನಸಾಮಾನ್ಯರು ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿರಲಿದ್ದಾರೆ ಎಂದು ಹೇಳಲಾಗಿದೆ.
Comments