ಲತಾ ಮಂಗೇಶ್ಕರ್ ಹೆಸರಿನಲ್ಲಿ ವಂಚನೆ; ದೂರು ದಾಖಲು

ಮುಂಬೈ: ಸಂಗೀತ ಲೋಕದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರು ಹೇಳಿಕೊಂಡು ಮಹಿಳೆಯೊಬ್ಬಳು ಜನರಿಂದ ದೇಣಿಗೆ ಸಂಗ್ರಹಿಸಿ ವಂಚನೆ ಮಾಡುತ್ತಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
ರೇವತಿ ಖರೆ ಎನ್ನುವ ಮಹಿಳೆ ಲತಾ ಅವರ ಹೆಸರಿನಲ್ಲಿ ಜನರಿಂದ ದೇಣಿಗೆ ಸಂಗ್ರಹಿಸಿ ವಂಚನೆ ಮಾಡುತ್ತಿದ್ದು, ಈ ಬಗ್ಗೆ ಗಾಮ್'ದೇವಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ರೇವತಿ ಖರೆ ಎನ್ನುವ ಮಹಿಳೆಯೊಬ್ಬರು ಲೆಟರ್ ಹೆಡ್ ಗಳನ್ನು ಮುದ್ರಿಸಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿ ಉದ್ಯಮಿಗಳು ಹಾಗೂ ಎನ್ ಜಿಒ ಸಂಘಟನೆಗಳ ಬಳಿ ಹಣ ಸಂಗ್ರಹಿಸಿದ್ದಾಳೆ.
ರೇವತಿಯವರಿಗೆ ಹಣ ನೀಡಿದ್ದ ವ್ಯಕ್ತಿಯೊಬ್ಬರುಲತಾ ಅವರಿಗೆ ತಾವು ಹಣ ನೀಡಿರುವ ವಿಚಾರವನ್ನು ಹೇಳಿ, ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಂದೇಶವೊಂದನ್ನು ಕಳುಹಿಸಿದ್ದಾರೆ. ಈ ವಿಷಯ ತಿಳಿದ ಲತಾ ಅವರಿಗೆ ಆಘಾತವಾಗಿದೆ. ಕೂಡಲೇ ತಮ್ಮ ಆಪ್ತ ಸಹಾಯಕ ಮಹೇಶ್ ರಾಥೋಡ್ ಎಂಬುವವರಿಗೆ ಈ ಕುರಿತು ಗಾಮ್'ದೇವಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸೂಚಿಸಿದ್ದಾರೆ.
ರೇವತಿ ಮಾತುಗಳಿಗೆ ಮರುಳಾದ ಹಲವಾರು ಜನರು ಲಕ್ಷಾಂತರ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಪೊಲೀಸರು ಇದೀಗ ಮಹಿಳೆಯ ವಂಚನೆ ಕುರಿತಂತೆ ತನಿಖೆ ಚುರುಕುಗೊಳಿಸಿದ್ದು ರೇವತಿಗೆ ದುಡ್ಡುಕೊಟ್ಟು ವಂಚನೆಗೊಳಗಾದ ಜನರಿಂದ ಹೇಳಿಕೆಗಳನ್ನು ಪಡೆದುಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.
Comments