ಡ್ರಗ್ಸ್ ಮಾಫಿಯಾ ಬಯಲಾಗಲು ರವಿತೇಜ ಸಹೋದರನ ಸಾವು ಕಾರಣ..!!
ಟಾಲಿವುಡ್ ನ ಅನೇಕ ನಟ-ನಟಿಯರು 'ಡ್ರಗ್ಸ್ ಮಾಫಿಯಾ'ದಲ್ಲಿ ತೊಡಗಿಕೊಂಡಿರುವ ಬಗ್ಗೆ ತೆಲಂಗಾಣ ಅಬಕಾರಿ ಇಲಾಖೆ ಸ್ಫೋಟಕ ಮಾಹಿತಿಯನ್ನ ಹೊರಹಾಕಿತ್ತು. ಇದಕ್ಕೆ ಸಂಬಂಧಿಸಿದಂತೆ 15 ಸೆಲೆಬ್ರಿಟಿಗಳಿಗೆ ನೋಟೀಸ್ ಕೂಡ ಕಳುಹಿಸಿತ್ತು. ಆ 15 ಜನರ ಪೈಕಿ ಒಬ್ಬೊಬ್ಬರೇ ನೋಟೀಸ್ ಗೆ ಉತ್ತರಿಸುತ್ತಿದ್ದಾರೆ.
ಟಾಲಿವುಡ್ ಡ್ರಗ್ಸ್ ಮಾಫಿಯಾ ಪಟ್ಟಿಯಲ್ಲಿ ಮಾಸ್ ಮಹಾರಾಜ ರವಿತೇಜ ಹೆಸರು ಕೂಡ ಇತ್ತು. ಈಗ ಈ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದ್ದು, ಟಾಲಿವುಡ್ ಡ್ರಗ್ಸ್ ಮಾಫಿಯಾ ಧಿಡೀರ್ ಎಂದು ಸ್ಫೋಟಗೊಳ್ಳಲು ರವಿತೇಜ ಸಹೋದರ ಭರತ್ ರಾಜ್ ಅವರ ಸಾವು ಕಾರಣ ಎಂಬ ಸುದ್ದಿ ಹೊರ ಬಿದ್ದಿದೆ.
ನಟ ರವಿತೇಜ ಸಹೋದರ ಭರತ್ ರಾಜು ಜೂನ್ 25 ರಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಭರತ್ ರಾಜು ಅವರ ಮೃತದೇಹವನ್ನ ಶವ ಪರೀಕ್ಷೆಗೆ ಕಳುಹಿಸಿ, ಅವರ ಮೊಬೈಲ್ ನ ವಶಪಡಿಸಿಕೊಂಡಿದ್ದರು.
ಭರತ್ ರಾಜು ಅವರ ಮೊಬೈಲ್ ವಶಪಡಿಸಿಕೊಂಡ ನಂತರ, ಅದರಲ್ಲಿನ ಮಾಹಿತಿ ಪರಿಶೀಲಿಸಿದಾಗ ಪೊಲೀಸರಿಗೆ ಡ್ರಗ್ಸ್ ಬಳಕೆದಾರರ ಜೊತೆ ಸಂಪರ್ಕವಿರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ನಂತರ ವಿಚಾರಣೆ ಕೈಗೊಂಡ ಪೊಲೀಸರಿಗೆ ಈ ಜಾಲದಲ್ಲಿ ಟಾಲಿವುಡ್ ನ ಅನೇಕರು ಭಾಗಿಯಾಗಿರುವುದರ ಬಗ್ಗೆಯೂ ಮಾಹಿತಿ ಸಿಕ್ಕಿದೆ ಎಂದು ತೆಲುಗಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ರವಿತೇಜ ಸಹೋದರ ಭರತ್ ರಾಜು ಬದುಕಿದ್ದಾಗ ಹಿಂದೊಮ್ಮೆ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿದ್ದರು. ನಂತರ ವಿಚಾರಣೆ ಬಳಿಕ ಬಿಡುಗಡೆಯಾಗಿದ್ದರು. ಆ ಸಮಯದಲ್ಲಿ ಭರತ್ ಕೈವಾಡ ಇರುವುದರ ಬಗ್ಗೆ ಪುರಾವೆ ಸಿಕ್ಕಿರಲಿಲ್ಲ. ಆದ್ರೀಗ, ಭರತ್ ರಾಜು ಕೂಡ ಆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಸಿಕ್ಕಿದೆಯಂತೆ.
ಅಬಕಾರಿ ಇಲಾಖೆ ಬಿಡುಗಡೆ ಮಾಡಿರುವ 15 ಜನರ ಪಟ್ಟಿಯಲ್ಲಿ ತೆಲುಗು ನಟ ರವಿತೇಜ ಅವರ ಹೆಸರೂ ಕೂಡ ಇದೆ. ಟಾಲಿವುಡ್ ಡ್ರಗ್ಸ್ ಮಾಫಿಯಾದಲ್ಲಿ ರವಿತೇಜ ಸಹೋದರನ ಪಾತ್ರ ಪ್ರಮುಖವಾಗಿತ್ತು ಎನ್ನಲಾಗಿದೆ. ಈಗ, ರವಿತೇಜ ಹೆಸರು ಈ ಪಟ್ಟಿಯಲ್ಲಿ ಬಂದಿರುವುದು ಮತ್ತಷ್ಟು ಅನುಮಾನ ಮೂಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರವಿತೇಜ, ಪೊಲೀಸರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನನ್ನ ಹೆಸರು ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮತ್ತು ನನಗೆ ಯಾವುದೇ ನೋಟೀಸ್ ಕೂಡ ಬಂದಿಲ್ಲವೆಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Comments