ಅಭಿಮಾನಿಯಾಗಿ ಶಿವಣ್ಣನ ಬಗ್ಗೆ ಲೂಸ್ ಮಾದ ಯೋಗೇಶ್ ಹೇಳಿದ್ದೇನು?
ಲೂಸ್ ಮಾದ ಯೋಗೇಶ್ ಅವರಿಗೆ ಶಿವಣ್ಣ ಜೊತೆಯಲ್ಲಿ ತೆರೆ ಹಂಚಿಕೊಳ್ಳಬೇಕು ಎನ್ನುವುದು ಬಹಳ ದಿನಗಳಿಂದ ದೊಡ್ಡ ಕನಸಾಗಿತ್ತಂತೆ. ಇದೀಗ, 'ಮಾಸ್ ಲೀಡರ್' ಚಿತ್ರದ ಮೂಲಕ ಯೋಗಿಯ ಕನಸು ಈಡೇರಿದೆ. ಇದೇ ಮೊದಲ ಬಾರಿಗೆ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ಯೋಗಿ ಅಭಿನಯಿಸಿದ್ದು, ಹ್ಯಾಟ್ರಿಕ್ ಹೀರೋ ಎದುರಲ್ಲಿ ಖಳನಾಯಕನಾಗಿ ಮಿಂಚಿದ್ದಾರೆ.
ಇತ್ತೀಚೆಗಷ್ಟೇ 'ಮಾಸ್ ಲೀಡರ್' ಚಿತ್ರದ ಆಡಿಯೋ ಬಿಡುಗಡೆಯಾಯಿತು. ತೆಲುಗು ನಟ ಬಾಲಕೃಷ್ಣ 'ಮಾಸ್ ಲೀಡರ್' ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಯೋಗೇಶ್, ಕರುನಾಡ ಚಕ್ರವರ್ತಿಯ ಅಭಿಮಾನಿಯಾಗಿ ತಮ್ಮ ಸಂತಸದ ಜೊತೆಗೆ ಕೆಲವೊಂದು ನೆನಪುಗಳನ್ನ ಬಿಚ್ಚಿಟ್ಟರು.
ಯೋಗೇಶ್ 10ನೇ ತರಗತಿ ಓದಬೇಕಾದರೇ 'ಜೋಗಿ' ಸಿನಿಮಾ ರಿಲೀಸ್ ಆಗಿತ್ತಂತೆ. ಆಗ ಕ್ಲಾಸ್ ಗೆ ಬಂಕ್ ಹಾಕಿ, ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿದ್ರಂತೆ. ಆ ವೇಳೆ ಪೊಲೀಸರಿಂದ ಏಟು ಕೂಡ ತಿಂದಿದ್ದರಂತೆ.
''ಶಿವಣ್ಣ ನನ್ನ ಜೀವನಕ್ಕೆ ಸ್ಪೂರ್ತಿಯಾಗಿರಿಸಿಕೊಂಡಿದ್ದೇನೆ. ಶಿವಣ್ಣ ಅವರ ಜೊತೆ ಒಂದು ಫೋಟೋ ತೆಗಿಸಿಕೊಂಡರೇ ಸಾಕು, ಅವರನ್ನ ಒಮ್ಮೆ ಭೇಟಿ ಮಾಡಿದರೇ ಸಾಕು ಅಂದುಕೊಂಡಿದೆ. ಆದ್ರೆ, ಅಚಾನಕ್ ಆಗಿ ಇಂಡಸ್ಟ್ರಿಗೆ ಬಂದೆ, ಈಗ ಸಿನಿಮಾ ಕೂಡ ಮಾಡಿಬಿಟ್ಟೆ. ತುಂಬಾ ಖುಷಿ ಆಯ್ತು.
'ಮಾಸ್ ಲೀಡರ್' ಸಿನಿಮಾಗೆ ಅವಕಾಶ ಬಂದಾಗ, ಸಂತೋಷ ಆಯಿತು, ಅದೇ ತರ ಭಯನೂ ಆಯ್ತು. ಯಾಕಂದ್ರೆ, ವಿಲನ್ ಪಾತ್ರ ಅಂದಾಗ, ಶಿವಣ್ಣ ಎದುರು ಹೇಗಪ್ಪ ಅಂತ ಯೋಚನೆ ಮಾಡ್ತಿದ್ದೆ. ಆದ್ರೆ, ಡೈರೆಕ್ಟರ್ ಮಾಡಿ ಎಂದು ಮಾಡಿಸಿದ್ದಾರೆ. ಸೋ, ಸಿನಿಮಾ ರಿಲೀಸ್ ಆದ್ಮೇಲೆ ಸ್ವಲ್ಪ ದಿನ ಊರ್ ಬಿಟ್ಟು ಹೋಗ್ತಿನಿ. ಆಮೇಲೆ ಯಾವ ಕಡೆಯಿಂದ, ಯಾರು ಬಂದು ಹೊಡಿತಾರೋ ಗೊತ್ತಿಲ್ಲ'' ಎಂದು 'ಮಾಸ್ ಲೀಡರ್' ಚಿತ್ರದ ಬಗ್ಗೆ ತಮ್ಮ ಅನುಭವವನ್ನ ಹಂಚಿಕೊಂಡರು.
Comments