ರೈತರ ಸಾಲಮನ್ನಾ ಮಾಡುವಂತೆ ನಟ ಯಶ್ ಆಗ್ರಹ

ಚಿತ್ರದುರ್ಗ : ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದು , ರೈತರ ಸಾಲಮನ್ನಾ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಚಿತ್ರನಟ ಯಶ್ ಇಂದಿಲ್ಲಿ ಆಗ್ರಹಿಸಿದರು. ನಗರದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಆಯೋಜಿಸಿದ್ದ ರೈತರ ರಾಜ್ಯ ಬೃಹತ್ ಸಮಾವೇಶ ಅಂಗವಾಗಿ ನಡೆದ ರೋಡ್ ಶೋಗಳಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಳೆದ 70 ವರ್ಷಗಳಿಂದ ಈ ಭಾಗದಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ ಎಂದು ಕೇಳಿದ್ದೇನೆ ಜೊತೆಗೆ ಸತತ 5 ವರ್ಷಗಳಿಂದಲೂ ಮಳೆ ಸಂಪೂರ್ಣ ಕೈಕೊಟ್ಟಿದೆ. ರಾಜ್ಯ ಸರ್ಕಾರ ಇದನ್ನು ಪರಿಗಣಿಸಿ ರೈತರ ಸಾಲ ಮನ್ನಾ ಮಾಡಲು ಮುಂದಾಗಬೇಕು ಎಂದರು.
ಈ ಭಾಗದ ಜನರಿಗೆ ನೀರು ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಸರ್ಕಾರ ಆದಷ್ಟು ಬೇಗ ಮುಗಿಸಿ ರೈತರ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಜೊತೆಗೆ ರೈತರು ಬೆಳೆದ ತರಕಾರಿ ಮತ್ತು ಧವಸಧಾನ್ಯಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಅನೇಕ ರೈತ ಸಂಘಗಳಿವೆ. ಎಲ್ಲಾ ಸಂಘಗಳ ಮೂಲ ಉದ್ದೇಶ ಒಂದೇ ಆಗಿದೆ. ರೈತರ ಸಮಸ್ಯೆಗಳು ಎದುರಾದಾಗ ರಾಜ್ಯದ ಎಲ್ಲ ರೈತ ಸಂಘಗಳು ಒಗ್ಗೂಡಿ ಒಂದೇ ವೇದಿಕೆಯಲ್ಲಿ ಭಾಗವಹಿಸಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಯಶ್ ರೈತ ಸಂಘಗಳಿಗೆ ಸಲಹೆ ನೀಡಿದರು.
Comments