ಕೋವಿಡ್ ಸೋಂಕಿಗೆ ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಬಲಿ

ಮಾರಕ ಕೊರೋನಾ ವೈರಸ್ ಸೋಂಕಿಗೆ ಮತ್ತೋರ್ವ ಜನಪ್ರತಿನಿಧಿ ಬಲಿಯಾಗಿದ್ದು, ಸೋಂಕಿಗೆ ತುತ್ತಾಗಿದ್ದ ಮಧ್ಯ ಪ್ರದೇಶದ ಖಂಡ್ವಾ ಕ್ಷೇತ್ರದ ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹ್ವಾಣ್ ನಿಧನರಾಗಿದ್ದಾರೆ.
ಬಿಜೆಪಿಯ ಹಿರಿಯ ನಾಯಕರಾಗಿ ಉತ್ತಮ ಕೆಲಸಗಳಿಂದ ಜನರ ಪ್ರೀತಿಗೆ ಪಾತ್ರರಾಗಿದ್ದರು. ಪ್ರೀತಿಯಿಂದ ಜನರು ಇವರನ್ನು ‘ನಂದು ಬಾಯ್’ (ನಂದು ಅಣ್ಣ) ಎಂದು ಕರೆಯುತ್ತಿದ್ದರು. ನಂದು ಬಾಯ್ ಮೆದಂತ್ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷಿಸಿದಾಗ ಪಾಸಿಟಿವ್ ಬಂದಿತ್ತು, ನಂತರ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
2009-14ರಲ್ಲಿ ಕಾಂಗ್ರೆಸ್‌ನ ಅರುಣ್ ಸುಭಾಷ್ ಚಂದ್ರ ಯಾದವ್ ಎದುರು ಸೋಲು ಕಂಡಿದ್ದು ಹೊರತು ಪಡಿಸಿ, ಖಾಂಡವಾ ಲೋಕಸಭಾ ಕ್ಷೇತ್ರದಿಂದ 1996ರಿಂದ ಉಳಿದ ಎಲ್ಲ ಚುನಾವಣೆಗಳಲ್ಲಿಯೂ ಸ್ಪರ್ಧಿಸಿ ಆಯ್ಕೆಯಾಗಿದ್ದರು. 2018ರ ಏಪ್ರಿಲ್ 18ರ ವರೆಗೂ ಮಧ್ಯ ಪ್ರದೇಶ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಇನ್ನು ನಂದಕುಮಾರ್ ಸಿಂಗ್ ಚೌಹ್ವಾಣ್ ಅವರ ಸಾವಿಗೆ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಮತ್ತು ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ.
Comments