ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಬರೆದು ಆತ್ಮಹತ್ಯೆಗೆ ಶರಣಾದ ಪ್ರೌಢಶಾಲಾ ಶಿಕ್ಷಕ

ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಬೋರ್ಡ್ ನಲ್ಲಿ ಬರೆದು ಅನುದಾನಿತ ಶಾಲೆಯ ಶಿಕ್ಷಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಂದ್ರಶೇಖರ್(32) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನಾಗಿದ್ದು, ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕನಗಾನಕೊಪ್ಪ ಗ್ರಾಮದ ನಿವಾಸಿ. ಎಂಎ ಇಂಗ್ಲಿಷ್ ಪದವಿ ವ್ಯಾಸಂಗ ಮಾಡಿದ್ದ ಚಂದ್ರಶೇಖರ್ ಅವರು ಮಂಚೇನಹಳ್ಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದರು. ಜತೆಗೆ ಟ್ಯುಟೋರಿಯಲ್ ನಡೆಸುತ್ತ ಜೀವನಕ್ಕೆ ಆಸರೆಯಾಗಿ ಮಾಡಿಕೊಂಡು ನೆಮ್ಮದಿ ಬದುಕು ಸಾಗಿಸುತ್ತಿದ್ದರು.
ಕೆಲಸ ನಿರ್ವಹಿಸುತ್ತಿದ್ದ ಶಿಕ್ಷಣ ಸಂಸ್ಥೆ ಬಾಗಿಲು ಮುಚ್ಚಿದ್ದು, ಮತ್ತೊಂದೆಡೆ ಟ್ಯುಟೋರಿಯಲ್ ಸಹ ನಡೆಯುತ್ತಿರಲಿಲ್ಲ. ಇದರಿಂದ ಭಾರೀ ಹೊಡೆತ ಬಿದ್ದು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಶಾಲಾ ಆಡಳಿತ ಮಂಡಳಿ ಅನುದಾನಿತ ಶಿಕ್ಷಕನಾಗಿ ಅನುಮೋದನೆ ಮಾಡದ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಆಚಾರ್ಯ ಪ್ರೌಢಶಾಲೆ ಆಡಳಿತ ಮಂಡಳಿ ಕಾರಣ ಎಂದು ಕಪ್ಪು ಹಲಗೆಯ ಮೇಲೆ ಡೆತ್ನೋಟ್ ಬರೆಯಲಾಗಿದೆ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಂದ್ರಶೇಖರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದು ಮಂಚೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Comments