ಅನ್ಯಾಯಗಳ ವಿರುದ್ಧ ವರದಿ ಮಾಡಿದ 29 ವರ್ಷದ ಪತ್ರಕರ್ತನ ಕಗ್ಗೊಲೆ

ಸರ್ಕಾರಿ ಭೂಮಿಯ ಅಕ್ರಮ ಮಾರಾಟ ಮತ್ತು ಗಾಂಜಾ ಮಾರಾಟದ ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದ ತಮಿಳನ್ ಟಿವಿ ವಾಹಿನಿಯಲ್ಲಿ ವರದಿಗಾರನಾಗಿದ್ದ 29 ವರ್ಷದ ಜಿ. ಮೋಸಸ್ ಎಂಬವರನ್ನು ದುಷ್ಕರ್ಮಿಗಳು ಅವರ ಮನೆ ಸಮೀಪವೇ ಹತ್ಯೆಗೈದಿದ್ದಾರೆ.
ಭಾನುವಾರ ರಾತ್ರಿ ಮೋಸೆಸ್ ಅವರನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಕುಡುಗೋಲಿನಿಂದ ದಾಳಿ ನಡೆಸಿದ್ದಾರೆ. ಅವು ಸಾಯುವವರೆಗೂ ಕತ್ತಿಯಿಂದ ಕೊಚ್ಚಿದ್ದಾರೆ. ರಕ್ತಮಡುವಿನಲ್ಲಿ ಬಿದ್ದ ಮೋಸೆಸ್ ಮೃತಪಟ್ಟಿದ್ದಾರೆ. ಅಕ್ರಮ ಜಮೀನು ಮಾರಾಟ ಮತ್ತು ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.
ಮೋಸಸ್ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಮಹಿಳಾ ಪತ್ರಕರ್ತರ ವೇದಿಕೆ ಹೀಗೆ ಹೇಳಿದೆ: “ಗಾಂಜಾ ಮಾರಾಟ ಮತ್ತು ಭೂ ಅತಿಕ್ರಮಣವನ್ನು ವರದಿ ಮಾಡಿದ್ದ ವರದಿಗಾರ ಮೋಸಸ್ ಅವರನ್ನು ಪುದು ನೆಲ್ಲೂರಿನಲ್ಲಿ ಹತ್ಯೆ ಮಾಡಲಾಗಿದೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ನಾವು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಕೋರುತ್ತೇವೆ. ಈ ಕೊಲೆಗೆ ಪೊಲೀಸರೇ ಕಾರಣ. ಏಕೆಂದರೆ ಮೋಸೆಸ್ ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ದೂರು ನೀಡಿದಾಗ್ಯೂ ಪೊಲೀಸ್ ಇಲಾಖೆಯಿಂದ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ” ಎಂದು ಆರೋಪಿಸಿದ್ದಾರೆ.
Comments