ಲಾಕ್ ಡೌನ್ ನಡುವೆ ಸುತ್ತಾಡಲು ಹೋದ ನವದಂಪತಿ ಶವವಾಗಿ ಪತ್ತೆ

ಬೆಂಗಳೂರಿನಿಂದ ಹಾಸನದಲ್ಲಿರುವ ಸ್ವಗ್ರಾಮಕ್ಕೆ ಬಂದಿದ್ದ ನವದಂಪತಿ ಹೊರಗೆ ಸುತ್ತಾಡಿಕೊಂಡು ಬರುತ್ತೇವೆ ಎಂದು ಬೈಕ್ನಲ್ಲಿ ಹೊರಗೆ ಹೋಗಿದ್ದ ಇವರಿಬ್ಬರ ಗ್ರಾಮದ ಸಮೀಪದ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬೇಲೂರು ತಾಲೂಕು ಮುರಹಳ್ಳಿ ಗ್ರಾಮದ ಅರ್ಥೇಶ್(27) ಮತ್ತು ಹೆನ್ನಲಿಗ್ರಾಮದ ಕೃತಿಕಾ(23) ಮೃತಪಟ್ಟವರು. ಇವರ ಮದುವೆ ಎರಡು ತಿಂಗಳ ಹಿಂದೆ ನಡೆದಿದೆ. ಅರ್ಥೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಲಾಕ್ಡೌನ್ ಜಾರಿಯಾದ ಬಳಿಕ ಸ್ವಗ್ರಾಮಕ್ಕೆ ಬಂದಿದ್ದರು. ಬುಧವಾರ ಪತ್ನಿ ಮನೆಗೆ ಬಂದ ಅರ್ಥೇಶ್ ಗುರುವಾರ ಸಂಜೆ ತಿರುಗಾಡಿಕೊಂಡು ಬರುವುದಾಗಿ ಪತ್ನಿ ಜೊತೆಗೆ ಮನೆಯಿಂದ ಹೊರ ಹೋಗಿದ್ದಾರೆ. ತುಂಬಾ ಸಮಯವಾದರೂ ಇಬ್ಬರೂ ವಾಪಸ್ ಬರಲಿಲ್ಲ. ಮನೆಯವರು ಫೋನ್ ಮಾಡಿದಾಗ ಇಬ್ಬರ ಮೊಬೈಲೂ ಸ್ವಿಚ್ ಆಫ್ ಬಂದಿದೆ. ಆತಂಕಗೊಂಡ ಮನೆಯವರು ಅವರನ್ನು ಹುಡುಕಲು ಶುರುಮಾಡಿದ್ದಾರೆ. ಈ ಸಮಯದಲ್ಲಿ ಹೇಮಾವತಿ ನದಿ ಸಮೀಪದ ರಸ್ತೆಯಲ್ಲಿ ಬೈಕ್ ಪತ್ತೆಯಾಗಿದೆ. ಪರಿಶೀಲಿಸಿದಾಗ, ಮೀನುಗಾರರು ಹಾಕಿದ್ದ ಬಲೆಯಲ್ಲಿ ಕೃತಿಕಾ ಶವ ಸಿಕ್ಕಿಕೊಂಡಿದ್ದು ಬೆಳಕಿಗೆ ಬಂದಿದೆ.
ಇನ್ನು ಕತ್ತಲಾಗಿದ್ದರಿಂದ ಅರ್ಥೇಶ್ ಕುರಿತು ಮಾಹಿತಿ ತಿಳಿದು ಬಂದಿರಲಿಲ್ಲ. ಇಂದು ಮುಂಜಾನೆ ಶೋಧ ಕಾರ್ಯಾಚರಣೆ ನಡೆಸಲಾಗಿ ಅರ್ಥೇಶ್ ಶವವನ್ನು ಹೊರತೆಗೆಯಲಾಗಿದೆ. ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೇಲ್ನೋಟಕ್ಕೆ ಸೆಲ್ಫಿ ತೆಗೆಯಲು ಹೋಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ.
Comments