ಕನ್ನಡದ ಹಿರಿಯ ಸಾಹಿತಿ, ನಿತ್ಯೋತ್ಸವದ ರಂಗು ತುಂಬಿದ ಕವಿ ಕೆ.ಎಸ್ ನಿಸಾರ್ ಅಹಮ್ಮದ್ ಇನ್ನಿಲ್ಲ
ಕನ್ನಡದ ಹಿರಿಯ ಸಾಹಿತಿ ನಿತ್ಸೋತ್ಸವ ಕವಿ ಕೆ.ಎಸ್.ನಿಸಾರ್ ಅಹಮ್ಮದ್(84) ಅವರು ಭಾನುವಾರ ನಮ್ಮನಗಲಿದ್ದಾರೆ. ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೀಗ ಪದ್ಮನಾಭನಗರದ ತಮ್ಮ ಸ್ವಗೃಹದಲ್ಲಿದ್ದ ಕೊನೆಯುಸಿರೆಳೆದಿದ್ದಾರೆ.
ಅವರ ಪೂರ್ಣ ಹೆಸರು ಕೊಕ್ಕರೆ ಹೊಸಹಳ್ಳಿ ಶೇಖ ಹೈದರ್ ನಿಸಾರ್ ಅಹಮ್ಮದ್. ಸಾಹಿತ್ಯ ಚಳುವಳಿ, ನವ್ಯಕಾವ್ಯಗಳ ಮೂಲಕ ಪ್ರಸಿದ್ದ ಪಡೆದವರು. ನಿತ್ಯೋತ್ಸವ ಕವಿ ಎಂದೇ ಪ್ರಸಿದ್ದ ಪಡೆದಿದ್ದ ನಿಸಾರ್ ಅಹಮ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಎಂಬ ಪದ್ಯವನ್ನು ಕೇಳದ ಶಾಲಾ ಮಕ್ಕಳಿಲ್ಲ.
1936ರಲ್ಲಿ ಫೆ.5ರಂದು ದೇವನಹಳ್ಳಿಯಲ್ಲಿ ಜನಿಸಿದ್ದ ಇವರು, 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರವರೆಗೆ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು.
10ನೇ ವಯಸ್ಸಿನಲ್ಲೇ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಅವರು ಜಲಪಾತದ ಬಗ್ಗೆ ಅವರು ಬರೆದ ಕವನ ಕೈಬರಹದ ಪತ್ರಿಕೆಯಲ್ಲಿಯೇ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ(2018) 21 ಕವನ ಸಂಕಲನ, 18 ವೈಚಾರಿಕ ಕೃತಿ, ಐದು ಮಕ್ಕಳ ಸಾಹಿತ್ಯ ಕೃತಿಗಳು, ಐದು ಅನುವಾದ ಕೃತಿ, 13 ಸಂಪಾದನ ಗ್ರಂಥಗಳನ್ನು ಹೊರತಂದಿದ್ದರು.
2007 ರಲ್ಲಿ ಶಿವಮೊಗ್ಗದಲ್ಲಿ ನಡೆದ 73 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದ್ದವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೆ ಭಾಜನರಾಗಿದ್ದ ಅವರು ಕನ್ನಡದ ಎಲ್ಲ ಪ್ರಾಕಾರಗಳನ್ನು ಶ್ರೀಮಂತಗೊಳಿಸಿದ್ದರು. ಇತ್ತೀಚೆಗಷ್ಟೇ 15 ದಿನಗಳ ಹಿಂದೆ ಅಮೆರಿಕದಲ್ಲಿದ್ದ ಅವರ ಪುತ್ರ ಕೂಡ ನಿಧನರಾಗಿದ್ದರು. ಇದರಿಂದ ನಿಸಾರ್ ಅಹಮದ್ ಮಾನಸಿಕವಾಗಿ ಅವರು ತೀವ್ರ ಆಘಾತಕ್ಕೊಳಗಾಗಿದ್ದರು ಇಂತಹ ಕವಿ ಇದೀಗ ವಯೋ ಸಹಜ ಕಾಯಿಲೆಯಿಂದಾಗಿ ನಿಧನರಾಗಿದ್ದಾರೆ. ಈ ಮೂಲಕ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ.
Comments