ಪತ್ರಕರ್ತರಿಗೆ ಕೋವಿಡ್-19 ಪರೀಕ್ಷೆ ನಡೆಸುವುದಕ್ಕೆ ಅಡ್ಡಿಪಡಿಸಿ ಅವರ ಮೇಲೆ ಹಲ್ಲೆ

ಮಾಧ್ಯಮವರಿಗೆ ಕೋವಿಡ್-19 ಪರೀಕ್ಷೆ ಮಾಡುವುದಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಗ ಅಡ್ಡಿಪಡಿಸಿದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.
ತನ್ನ ಮನೆಯ ಸಮೀಪವಿರುವ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರಿಗೆ ಕೊರೋನ ಪರೀಕ್ಷೆ ನಡೆಯುತ್ತಿದ್ದ ವೇಳೆ ಶ್ರೀಕಂಠೇಗೌಡ ಮತ್ತು ಪುತ್ರ ಹಾಗೂ ಇತರರು ಆಕ್ಷೇಪ ವ್ಯಕ್ತಪಡಿಸಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಶ್ರೀಕಂಠೇಗೌಡ, ಅವರ ಪುತ್ರ ಹಾಗೂ ಬಡಾವಣೆಯ ಇತರರ ನಡುವೆ ವಾಗ್ವಾದ, ತಳ್ಳಾಟ ಶುರುವಾಗಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶ್ರೀಕಂಠೇಗೌಡ ಪುತ್ರನನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಘಟನೆ ಬಗ್ಗೆ ಮಂಡ್ಯ ಡಿಸಿ ಡಾ.ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದು, ಕೋವಿಡ್ ಪರೀಕ್ಷೆಗೆ ಒಳಪಡುತ್ತಿದ್ದ ಪತ್ರಕರ್ತರ ಮೇಲೆ ಹಲ್ಲೆ ಮತ್ತು ನಿಂದನೆ ಆಗಿರುವ ಬಗ್ಗೆ ದೂರು ಬಂದಿದೆ. ಹಲ್ಲೆ ಮತ್ತು ನಿಂದನೆ ಬಗ್ಗೆ ವೀಡಿಯೋ ಸಹ ಸಿಕ್ಕಿದೆ. ಸ್ಥಳೀಯ ವಿಧಾನ ಪರಿಷತ್ ಸದಸ್ಯರು ಹಾಗೂ ಅವರ ಬೆಂಬಲಿಗರು ಇದರಲ್ಲಿ ಭಾಗಿ ಆಗಿದ್ದಾರೆ. ಕಾನೂನಾತ್ಮಕವಾಗಿ ನಾವು ಕ್ರಮ ಕೈಗೊಳ್ಳುತ್ತೇವೆ. ಪತ್ರಕರ್ತರು ಕೊರೊನಾ ಸಂದರ್ಭದಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ. ಅವರ ಮೇಲೆ ಹಲ್ಲೆ ಮಾಡುವುದು ತಪ್ಪು. ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
Comments