ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಮತ್ತೆ ಗುಂಡಿನ ಸದ್ದು

ಜಾಮಿಯಾ ಇಸ್ಲಾಮಿಯಾ ವಿಶ್ವ ವಿದ್ಯಾಲಯದಲ್ಲಿ ಮತ್ತೊಮ್ಮೆ ಗುಂಡಿನ ಶಬ್ಧ ಕೇಳಿದೆ. ಭಾನುವಾರ ತಡರಾತ್ರಿ ಜಾಮಿಯಾ ವಿವಿಯ ಗೇಟ್ ನಂ 5ರಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಸ್ಕೂಟಿಯಲ್ಲಿ ಬಂದ ಇಬ್ಬರು ಭಾನುವಾರ ರಾತ್ರಿ 1 ಗಂಟೆ ವೇಳೆ ಗುಂಡು ಹಾರಿಸಿದರು. ವಿವಿಯ ಗೇಟ್ ಸಂಖ್ಯೆ 6ರ ಬಳಿ ಮೊದಲು ಗುಂಡು ಹಾರಿಸಿದರು. ನಂತರ ಗೇಟ್ ಸಂಖ್ಯೆ 1ರ ಬಳಿ ಗುಂಡು ಹಾರಿದ ಶಬ್ಧ ಕೇಳಿತು ಎಂದು ಅಫಾಕ್ ಹೇಳಿದ್ದಾರೆ. ಗುಂಡು ಹಾರಿಸಿದವರು ಬಂದ ವಾಹನದ ಸಂಖ್ಯೆ ಗಮನಿಸಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಓಖ್ಲಾ ಕಡೆಯಿಂದ ಸ್ಕೂಟಿಯಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಳಿಕ ಜುಲೆನಾ ಕಡೆ ಹೋದರು. ಗೇಟ್ 6ರ ಬಳಿ ಮೊದಲು ಗುಂಡು ಹಾರಿಸಿದ ಅವರು ಪುನಃ ಗೇಟ್ 1ರ ಬಳಿ ಗುಂಡು ಹಾರಿಸಿದ್ದಾರೆ ಎಂದು ಜಾಮಿಯಾ ವಿವಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ದೆಹಲಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು. ಗುಂಡು ಹಾರಿದ ಸ್ಥಳದಲ್ಲಿ ಯಾವುದೇ ಪುರಾವೆಗಳು ದೊರೆತಿಲ್ಲ. ಗುಂಡು ಹಾರಿಸಿದವರು ಸ್ಕೂಟಿಯಲ್ಲಿ ಬಂದಿದ್ದಾರೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಕಾರಿನಲ್ಲಿ ಬಂದಿದ್ದಾರೆ ಎನ್ನುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಡಿಸಿಪಿ ಕುಮಾರ್ ಜ್ಞಾನೇಶ್ ಹೇಳಿದ್ದಾರೆ.
Comments