ಬಂದಿದ್ದು ದೇವರ ವೇಷದಲ್ಲಿ… ಕಂಡಿದ್ದು ಕಳ್ಳನ ರೂಪದಲ್ಲಿ..!! ನಡೆದು ಹೋಯ್ತು ಸಿನಿಮೀಯ ಸ್ಟೈಲ್’ನಲ್ಲಿ …?

ಇತ್ತಿಚಿಗೆ ಸಿನಿಮಾದಲ್ಲಿ ನಡೆಯುವ ಕೆಲವೊಂದು ಸನ್ನಿವೇಶಗಳು ನಮ್ಮ ಜೀವನದಲ್ಲಿಯೂ ನಡೆದಿರುತ್ತವೆ ಎನಿಸುತ್ತದೆ.. ಇನ್ನೂ ಕೆಲವರು ಸಿನಿಮೀಯ ರೀತಿಯಲ್ಲಿ ಕೊಲೆ ಸುಲಿಗೆ ಮಾಡಿ ಸಿಕ್ಕಿ ಹಾಕಿಕೊಂಡಿರುವುದುಂಟು…ಅದೇ ರೀತಿಯಾಗಿ ಇಲ್ಲೊಂದು ಬ್ಯಾಂಕ್ ದರೋಡೆ ನಡೆದಿದೆ. ಇದು ಹಾಲಿವುಡ್ ಸಿನಿಮಾ ದೃಶ್ಯಗಳನ್ನು ಮೀರಿಸುವ ಚಾಲಾಕಿ ಲೂಟಿಕೋರರ ಕೃತ್ಯ. 10 ದರೋಡೆಕೋರರ ಗುಂಪೊಂದು ಸಾಂತಾ ಕ್ಲಾಸ್ ವೇಷ ಧರಿಸಿ 14 ಅಂಗಡಿಗಳು ಮತ್ತು ಬ್ಯಾಂಕ್‍ಗಳಲ್ಲಿ ರಾಬರಿ ಮಾಡಿ 50 ಲಕ್ಷ ರೂ.ಗಳಿಗೂ ಹೆಚ್ಚು ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿರುವ ಘಟನೆ ರಾಜಧಾನಿ ದೆಹಲಿ ಸಮೀಪ ಗುರ್‍ಗಾಂವ್(ಗುರುಗ್ರಾಮ)ನ ಖಂಡಸಾ ರಸ್ತೆ ಪ್ರದೇಶದಲ್ಲಿ ನಡೆದಿದೆ.
ಕಳ್ಳತನ ಮಾಡಲು ಹೊಸ ಹೊಸ ಪ್ರಯತ್ನಗಳು ನಡೆಯುತ್ತಿದ್ದು ದರೋಡೆಕೋರರ ಹೊಸ ತಂತ್ರದಿಂದ ಪೊಲೀಸ್ ಇಲಾಖೆ ಬೆಚ್ಚಿಬಿದ್ದಿದೆ. ಸಿಸಿಟಿವಿ ಕ್ಯಾಮೆರಾಗಳು ಈ ಕೃತ್ಯಗಳನ್ನು ಸೆರೆ ಹಿಡಿದಿದ್ದರೂ, ಚಾಲಾಕಿಗಳು ಸಾಂತಾ ಕ್ಲಾಸ್ ಮಾಸ್ಕ್ ಧರಿಸಿದ್ದರಿಂದ ಅವರನ್ನು ಗುರುತಿಸುವುದು ಕಷ್ಟಕರವಾಗಿದೆ. ಬೆಳಗ್ಗೆ ದಟ್ಟ ಮಂಜು ಸುರಿಯುತ್ತಿದ್ದಾಗ 10 ಮಂದಿ ದರೋಡೆಕೋರರು ಸಾಂತಾಕ್ಲಾಸ್ ಮಾಸ್ಕ್ಗಳನ್ನು ಧರಿಸಿ ಖಂಡಸಾ ರಸ್ತೆಯ ವಾಣಿಜ್ಯ ಸಂಕೀರ್ಣವೊಂದಕ್ಕೆ ನುಗ್ಗಿ ನಾಲ್ಕು ಅಂಗಡಿಗಳು ಮತ್ತು ಎರಡು ಬ್ಯಾಂಕ್ಗಳೂ ಸೇರಿದಂತೆ 14 ವಾಣಿಜ್ಯ ಮಳಿಗೆಗಳಲ್ಲಿ ದರೋಡೆ ಮತ್ತು ಕಳ್ಳತನ ನಡೆಸಿ ಲಕ್ಷಾಂತರ ರೂ. ನಗದು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಸುದ್ಧಿ ತಿಳಿದ ಕೂಡಲೇ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಶೇಷ ದಳ ಶ್ವಾನದಳಗಳೊಂದಿಗೆ ತಪಾಸಣೆ ನಡೆಸಿದರು. ದರೋಡೆಕೋರರು ಲೂಟಿ ಮಾಡಿರುವ ನಗದು ಮತ್ತು ಇತರ ವಸ್ತುಗಳ ಮೌಲ್ಯವು 50 ಲಕ್ಷ ರೂ.ಗಳಿಗೂ ಹೆಚ್ಚು ಎಂದು ಎಸಿಪಿ ರಾಜೀವ್ ಕುಮಾರ್ ಅಂದಾಜು ಮಾಡಿದ್ದಾರೆ. ಕಳ್ಳಿರಿಗಾಗಿ ಪೊಲೀಸರು ಬಲೆಯನ್ನು ಬೀಸಿದ್ದಾರೆ. ಇನ್ನೂ ಅಪರಾಧಿಗಳು ಸಿಕ್ಕಿಲ್ಲ ಎಂಬ ಮಾಹಿತಿ ತಿಳಿದು ಬಂದಿಲ್ಲ.
Comments