ಬೆಂಗಳೂರು ಉದ್ಯೋಗಸ್ಥರೇ ಎಚ್ಚರ ನಿಮ್ಮ ಡೇಟಾ ಆನ್ ಲೈನ್ ನಲ್ಲಿ ಲಭ್ಯ..!

ಈಗ ಆನ್ಲೈನ್ ನಲ್ಲಿ ಖಾಸಗಿ ಕಂಪನಿಗಳ ಡಾಟಾಗಳು ಕೇವಲ 500ರಿಂದ 1000ಕ್ಕೆಲ್ಲ ಸಿಗುತ್ತವೆ. ಈ ಡಾಟಾ ಖರೀದಿಸುವ ಆನ್ಲೈನ್ ವಂಚಕರು, ನಂತರ ಸದರಿ ಉದ್ಯೋಗಸ್ಥನ ಬ್ಯಾಂಕ್ ಗೆ ಕನ್ನ ಹಾಕುತ್ತಾರೆ.
ಬಾಟಂ ಫಿಶಿಂಗ್ ದಂಧೆಯಲ್ಲಿ ಸೆರೆಯಾಗಿದ್ದ ಕಪಿಲ್, ತನ್ನ ಕೃತ್ಯಕ್ಕೆ ಆನ್ಲೈನ್ ಲಭ್ಯವಿದ್ದ ಡಾಟಾ ಬಳಸಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ಜಾಲವು ಕರ್ನಾಟಕವೂ ಸೇರಿದಂತೆ 24 ರಾಜ್ಯಗಳಲ್ಲಿ ವಿಸ್ತರಿಸಿತ್ತು. ವಿಶೇಷವೆಂದರೆ ವಂಚನೆಗೊಳಗಾದವರ ಪೈಕಿ ಬಹುತೇಕರು ಖಾಸಗಿ ಕಂಪನಿ ಉದ್ಯೋಗಳಾಗಿದ್ದರು. ಇನ್ನೂ ಕೆಲವರು ಕ್ಯಾಬ್ ಚಾಲಕರಾಗಿದ್ದರು. ಇದುವರೆಗೆ 200ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.
2017ರ ಮೇ 5ರಂದು ಜಿಗಣಿಯ ಕ್ಯಾಬ್ ಚಾಲಕ ಸುರೇಶ್ ಎಂಬುವರ 2 ಬ್ಯಾಂಕ್ ಖಾತೆಗಳಿಂದ ₹7 ಸಾವಿರ ಎಗರಿಸಿದ್ದರು. ಮೊಬೈಲ್ ಕರೆ ವಿವರ (ಸಿಡಿಆರ್) ಹಾಗೂ ಐಪಿ ವಿಳಾಸ ಆಧರಿಸಿ ತನಿಖೆಗಿಳಿದ ಸಿಐಡಿ ಸೈಬರ್ ಕ್ರೈಂ ಪೊಲೀಸರು, ಬೆಂಗಳೂರು ಹಾಗೂ ಜಾರ್ಖಂಡ್'ನಲ್ಲಿ ಕಾರ್ಯಾಚರಣೆ ನಡೆಸಿದ್ದರು. ಬಳಿಕ ಜುಲೈ 25ರಂದು ಜಾರ್ಖಂಡ್ನ ಕಪಿಲ್ ದೇವ್, ಸೂರಜ್ ಕುಮಾರ್, ಸುಶೀಲ್ ಕುಮಾರ್, ಸುಮನ್ ಹಾಗೂ ಬಿಪ್ಲವ್ ಕುಮಾರ್ ಪೊಲೀಸರ ಬಲೆಗೆ ಬಿದ್ದಿದ್ದರು.
ಏನಿದು ಬಾಟಂ ಫಿಶಿಂಗ್ ?: ಸಾರ್ವಜನಿಕರ ಬ್ಯಾಂಕ್ ಖಾತೆಗಳಿಂದ ಅಲ್ಪ ಮೊತ್ತದ ಹಣವನ್ನು ಅಕ್ರಮವಾಗಿ ತಮ್ಮ ಖಾತೆಗೆ ವರ್ಗಾಯಿಸಿ ಕೊಳ್ಳುವುದೇ ಬಾಟಂ ಫಿಶಿಂಗ್. ಸಣ್ಣ ಪ್ರಮಾಣದಲ್ಲಿ ಹಣ ಕಳೆದುಕೊಂಡರೆ ನಾಗರಿಕರು ಪೊಲೀಸರಿಗೆ ದೂರು ಕೊಡುವುದಿಲ್ಲ, ಒಂದು ವೇಳೆ ದೂರು ಕೊಟ್ಟರೂ ಕಡಿಮೆ ಮೊತ್ತವಾದ ಕಾರಣ ಪೊಲೀಸರು ತನಿಖೆ ನಡೆಸುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
Comments