ನಟೋರಿಯಸ್ ರೌಡಿ ಇಲಿಯಾಸ್ ಕೊಲೆಯಾಗಿದ್ದು ಹೇಗೆ..?
ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳಿಬ್ಬರು ನಟೋರಿಯಸ್ ರೌಡಿ ಎದೆಗೆ ಚೂರಿ ಇರಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕರಾವಳಿ ತೀರವನ್ನು ಬೆಚ್ಚಿ ಬೀಳಿಸಿದೆ.15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಟಾರ್ಗೆಟ್ ಗ್ರೂಪ್ ಸದಸ್ಯ ಇಲಿಯಾಸ್ ಕೊಲೆಯಾದ ನಟೋರಿಯಸ್ ರೌಡಿ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಜಿಪ್ಪು ಕುಪಾಡಿಯಾ ಪ್ರದೇಶದ ಪ್ರಾರ್ಥನಾ ಮಂದಿರದ ಎದುರಿನ ಅಪಾರ್ಟ್‍ಮೆಂಟ್‍ನ ಮೂರನೆ ಮಹಡಿಯಲ್ಲಿ ಈ ಘಟನೆ ನಡೆದಿದೆ.
ಮಂಗಳೂರಿನ ರೌಡಿ ಶೀಟರ್ ಆಗಿದ್ದ ಇಲಿಯಾಸ್ ಈ ಹಿಂದೆ ಉಳ್ಳಾಲದಲ್ಲಿ ನೆಲೆಸಿದ್ದ. ಪ್ರಾಣ ಬೆದರಿಕೆ ಹಿನ್ನೆಲೆಯಲ್ಲಿ ಕೇವಲ ಆರು ತಿಂಗಳ ಹಿಂದೆಯಷ್ಟೆ ಮಸೀದಿ ಮುಂಭಾಗದ ಅಪಾರ್ಟ್‍ಮೆಂಟ್‍ಗೆ ಶಿಫ್ಟ್ ಆಗಿದ್ದ. ಕೊಲೆ ಯತ್ನ ಪ್ರಕರಣದಲ್ಲಿ ಇತ್ತೀಚೆಗೆ ಜೈಲು ಸೇರಿದ್ದ ಇಲಿಯಾಸ್ ಮೂರು ದಿನಗಳ ಹಿಂದಷ್ಟೆ ಬಿಡುಗಡೆಯಾಗಿದ್ದ. ಇಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ಇಲಿಯಾಸ್ ಪತ್ನಿ ಆಸ್ಪತ್ರೆಗೆಂದು ಹೊರಹೋಗಿದ್ದರು. ಈ ಸಂದರ್ಭದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾಲಿಂಗ್‍ಬೆಲ್ ಮಾಡಿ ಇಲಿಯಾಸ್ ಇದ್ದಾರಾ ಎಂದು ಕೇಳಿ ಒಳಬಂದು ತಾಯಿ, ಅತ್ತೆ, ತಮ್ಮನ ಎದುರೇ ರೂಮಿನಲ್ಲಿ ಮಲಗಿದ್ದ ಇಲಿಯಾಸ್ ಎದೆಗೆ ಚೂರಿಯಿಂದ ಮನಬಂದಂತೆ ಚುಚ್ಚಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಚೀರಾಡುತ್ತಿದ್ದ ಇಲಿಯಾಸ್‍ನನ್ನು ತಕ್ಷಣ ಮನೆಯವರು ಮತ್ತು ಅಕ್ಕಪಕ್ಕದವರು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾಂಗ್‍ವಾರ್ ಶಂಕೆ: ಅಪರಾಧ ಕೃತ್ಯಗಳನ್ನು ಎಸಗುವ ಉದ್ದೇಶದಿಂದಲೇ ಇಲಿಯಾಸ್ ಟಾರ್ಗೆಟ್ ಗ್ರೂಪ್ ಸಂಘಟಿಸಿದ್ದ ಎನ್ನಲಾಗಿದೆ. ಈ ನಡುವೆ ಗ್ರೂಪ್‍ನಲ್ಲಿ ಬಿರುಕುಂಟಾಗಿತ್ತು ಎಂದು ತಿಳಿದುಬಂದಿದೆ. ಸಫ್ವಾನ್, ದಾವೂದ್ ಗ್ಯಾಂಗ್ ನಡುವೆ ಇಲಿಯಾಸ್ ವೈಮನಸ್ಯ ಹೊಂದಿದ್ದು, ಹಳೆ ದ್ವೇಷದಿಂದಲೇ ಈತನ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸುಳಿವು ಪತ್ತೆ: ಕೆಲ ಶಂಕಿತ ವ್ಯಕ್ತಿಗಳ ಭಾವಚಿತ್ರಗಳನ್ನು ನೋಡಿ ಇಲಿಯಾಸ್ ಕುಟುಂಬದವರು ಗುರುತಿಸಿದ್ದಾರೆ. ಅಪರಾಧಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಆದಷ್ಟು ಶೀಘ್ರ ಕೊಲೆಗಾರರನ್ನು ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲಿಯಾಸ್ ಹಿನ್ನೆಲೆ: ಅಪರಾಧ ಕೃತ್ಯಗಳನ್ನು ಸಂಘಟಿಸುವ ಉದ್ದೇಶದಿಂದಲೇ ಇಲಿಯಾಸ್ ಟಾರ್ಗೆಟ್ ಗ್ರೂಪ್ ಸ್ಥಾಪಿಸಿಕೊಂಡಿದ್ದ ಎನ್ನಲಾಗಿದೆ. ಉತ್ತರ ಭಾರತ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿಕೊಂಡು ಬಂದಿದ್ದ ಇಲಿಯಾಸ್ ಆ ವಿದ್ಯಾರ್ಥಿನಿ ಮೂಲಕ ಹನಿಟ್ರ್ಯಾಪ್ ಮಾಡಿ ಉದ್ಯಮಿಗಳಿಂದ ಕೋಟ್ಯಂತರ ರೂಪಾಯಿ ಹಫ್ತಾ ವಸೂಲಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ರಕ್ಷಣೆಗಾಗಿ ರಾಜಕೀಯಕ್ಕೆ: 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಮಂಗಳೂರಿನಲ್ಲಿ ನಟೋರಿಯಸ್ ರೌಡಿ ಎಂದೇ ಗುರುತಿಸಿಕೊಂಡಿದ್ದ ಇಲಿಯಾಸ್ ತನ್ನ ರಕ್ಷಣೆಗಾಗಿ ರಾಜಕೀಯ ಸೇರಲು ತೀರ್ಮಾನಿಸಿದ್ದ. ಹೀಗಾಗಿ ಆನ್‍ಲೈನ್ ಮೂಲಕ ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದ ಈತ ಮಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿ ಸೋಲುಂಡ ನಂತರ ಉಪಾಧ್ಯಕ್ಷನಾಗಿ ನಿಯೋಜನೆಗೊಂಡಿದ್ದ.
Comments