ಪ್ರಸಿದ್ಧ ನಟಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಯುವಕ ಸೆರೆ
ಪ್ರಾರ್ಥನೆ ಮಾಡಲು ಬರುತ್ತಿದ್ದ ನಟಿಯ ಜೊತೆ ಪರಿಚಯ ಮಾಡಿಕೊಂಡ ಫ್ರಾಂಕ್ಲಿನ್ ಬಳಿಕ ಪ್ರೀತಿಸುವಂತೆ, ಮದುವೆಯಾಗುವಂತೆ ಹೇಳಿದ್ದ. ಬಳಿಕ ನಟಿಯ ಮೊಬೈಲ್ ಸಂಖ್ಯೆ ಪಡೆದುಕೊಂಡು ಆಕೆಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದನು ಎಂದು ತಿಳಿದುಬಂದಿದೆ.
ಮಲಯಾಳಂ ಚಿತ್ರ ನಟಿಯನ್ನು ಪ್ರೀತಿಸುವಂತೆ, ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಇಲ್ಲಿನ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫ್ರಾಂಕ್ಲಿನ್ ವಿಸಿಲ್ (28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಬಸವನಗುಡಿಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದಾನೆ ಎಂದು ತಿಳಿದು ಬಂದಿದೆ. ನಟಿ ರೆಬೋ ಮೋನಿಕಾ ಜಾನ್ಗೆ ಆರೋಪಿ ಫ್ರಾಂಕ್ಲಿನ್ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಪ್ರತಿ ರವಿವಾರ ಪ್ರಾರ್ಥನೆ ಮಾಡಲು ಚರ್ಚ್ ಗೆ ಹೋಗುತ್ತಿದ್ದ ವೇಳೆ ಮೋನಿಕಾರನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಕಿರುಕುಳ ಸಂಬಂಧ ನಟಿ ಮೋನಿಕಾ ಮಡಿವಾಳ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಫ್ರಾಂಕ್ಲಿನ್ ವಿಸಿಲ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಲಯಾಳಂ ಭಾಷೆಯ 'ಇಂಟೇ ಸ್ವರ್ಗರಾಜ್ಯಂ' ಹೆಸರಿನ ಚಿತ್ರದಲ್ಲಿ ಮೋನಿಕಾ ನಟಿಸಿದ್ದಾರೆ.
Comments