ಚಿಕಿತ್ಸೆಗೆ ಹಣವಿಲ್ಲದೆ ಮಗುವನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡ್ಕೊಂಡ ತಾಯಿ

34 ವರ್ಷದ ತಾಯಿ ಅನ್ಬುಕೋಡಿ ಎಂಬಾಕೆ ಡೆಂಘೆ ರೋಗದಿಂದ ಬಳಲುತ್ತಿದ್ದ ಸಾರ್ವಿನ್ ಎಂಬ ಮಗುವಿಗೆ ಚಿಕಿತ್ಸೆ ಕೊಡಿಸದಷ್ಟು ಆರ್ಥಿಕ ದುಃಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಅಷ್ಟೊಂದು ಹಣ ಒದಗಿಸಲು ಸಾಧ್ಯವಾಗದೆ ತಾಯಿ, ಮಗುವಿನೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
ಡೆಂಘೆ ರೋಗದಿಂದ ಬಳಲುತ್ತಿದ್ದ 6 ತಿಂಗಳ ಹಸುಗೂಸಿಗೆ ಚಿಕಿತ್ಸೆ ಕೊಡಿಸಲಾಗದೆ ತಾಯಿಯೊಬ್ಬಳು ಮಗುವನ್ನು ಸಾಯಿಸಿ, ತಾನೂ ಆತ್ಮಹತ್ಯೆಗೆ ಶರಣಾಗಿರುವ ಕರುಣಾಜನಕ ಘಟನೆ ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಬೆಲಕುರುಚಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ ಭಾನುವಾರ ಸಂಜೆ ಮಗು ಸಾರ್ವಿನ್ಗೆ ಅನಾರೋಗ್ಯ ಕಾಣಿಸಿಕೊಂಡಿದೆ. ನಂತರ ಸೋಮವಾರ ಬೆಳಗ್ಗೆ ತಾಯಿ ಅನ್ಬುಕೋಡಿ ತಮ್ಮ ಸಂಬಂಧಿ ಪರಿಸ್ವಾಮಿಯೊಂದಿಗೆ ಮಗುವನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಈ ವೇಳೆ ಮಗುವನ್ನು ಪರೀಕ್ಷಿಸಿದ ವೈದ್ಯರು ಡೆಂಘೆ ಇರುವುದಾಗಿ ಖಚಿತಪಡಿಸಿದ್ದಾರೆ. ಅಲ್ಲದೆ ಮಗುವಿಗೆ ಚಿಕಿತ್ಸೆ ನೀಡಲು ಪ್ರತಿದಿನ 4,000 ರೂ.ಗಳನ್ನು ನೀಡಬೇಕೆಂದು ಹೇಳಿದ್ದಾರೆ. ಮೊದಲೇ ಆರ್ಥಿಕ ದುಃಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಅಷ್ಟೊಂದು ಹಣ ಇರಲಿಲ್ಲ.
ಇದರಿಂದ ತುಂಬಾ ಆತಂಕಕ್ಕೆ ಒಳಗಾಗಿದ್ದ ಮಗುವಿನ ತಾಯಿ ಸಾರ್ವಿನನ್ನು ಆಸ್ಪತ್ರೆಯಿಂದ ವಾಪಸ್ಸು ಕರೆದುಕೊಂಡು ಬಂದಿದ್ದಾಳೆ. ಈ ವೇಳೆ ಸಂಬಂಧಿಕರಾದ ಪರಿಸ್ವಾಮಿ ಕೂಡ ಮಗು ಗುಣಮುಖವಾಗುತ್ತದೆ ಯೋಚನೆ ಮಾಡಬೇಡ ಎಂದು ಧೈರ್ಯ ತುಂಬಿದ್ದಾರೆ. ಆದರೆ, ರಾತ್ರಿ ಮಗು ಮಲಗಿಕೊಂಡಾಗ ತಾಯಿ ಅನ್ಬುಕೋಡಿ ಬೆಳಗಿನ ಜಾವದವರೆಗೂ ಯೋಚನೆ ಮಾಡಿ ನಂತರ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಬಂಧಿ ಪೆರಿಸ್ವಾಮಿ ತಿಳಿಸಿದ್ದಾರೆ.ಈ ಸಂಬಂಧ ಬೆಲಕುರುಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Comments